
ಈ ನಮ್ಮ ಭೂಮಿಯೇ ಹಾಗೆ ಅನೇಕ ಅಚ್ಚರಿಗಳನ್ನು ತನ್ನ ಒಡಲಿನ ಒಳಗೆ ಇಟ್ಟುಕೊಂಡಿದೆ. ಕೋಟ್ಯಾನು ಕೋಟಿ ಜೀವಿಗಳಿಗೆ ವಾಸಸ್ಥಾನವಾಗಿರುವ ಈ ಭೂಮಿಯಲ್ಲಿ ಕಂಡು ಹಿಡಿಯಲಾಗದ ಇನ್ನೂ ಅನೇಕ ರಹಸ್ಯಗಳು ಇವೆ. ಹಿಮಾಲಯದ ತೊಪ್ಪಲಿನಲ್ಲಿ, ಅಮೆಜಾನ್ ನಂತಹ ದಟ್ಟ ಅರಣ್ಯ, ಹಿಂದೂ ಮಹಾಸಾಗರ ಹೀಗೆ ಕೆಲ ಸ್ಥಳಗಳಲ್ಲಿ ಅದೆಷ್ಟೋ ರಹಸ್ಯಗಳು ಅಡಗಿವೆ. ಇಂದು ನಿಮಗೆ ಈ ರೀತಿ ಅಚ್ಚರಿಯನ್ನು ಹೊಂದಿರುವ ಕೆಲ ಸ್ಥಳಗಳ ಬಗ್ಗೆ ತಿಳಿಸುತ್ತೇವೆ. ಆ ಸ್ಥಳಗಳನ್ನು ನೋಡುತ್ತಿದ್ದರೆ ನಿಜವಾಗಿಯೂ ಆ ಸ್ಥಳಗಳು ಭೂಮಿಯ ಮೇಲೆ ಇರುವವೇ ಎಂದು ನಿಮಗೆ ಅಚ್ಚರಿಯಾಗುತ್ತದೆ.
1) ಕವಾಹ್ ಇಜೆನ್ – Kawah Ijen
ಜ್ವಾಲಾಮುಖಿ ಪರ್ವತಗಳ ಬಗ್ಗೆ ನಮಗೆಲ್ಲ ಗೊತ್ತಿದೆ. ಬೆಂಕಿಯ ಉಂಡೆಯನ್ನು ಚಿಮ್ಮುವ ಬೃಹತ್ ಪರ್ವತಗಳು ಪ್ರಪಂಚದ ಅನೇಕ ದೇಶಗಳಲ್ಲಿ ಇವೆ. ಸಹಜವಾಗಿ ಜ್ವಾಲಾಮುಖಿಯ ಬಣ್ಣವು ಕೆಂಪು ಇರುತ್ತದೆ ಎಂದು ನಮಗೆಲ್ಲ ತಿಳಿದ ವಿಚಾರ. ಆದರೆ ಇಂಡೋನೇಷ್ಯಾ ದೇಶದ ಗಡಿಭಾಗದಲ್ಲಿ ಇರುವ “ಕವಾಹ್ ಇಜೆನ್” ಎನ್ನುವ ಜ್ವಾಲಾಮುಖಿ ಪರ್ವತಗಳು “ನೀಲಿ” ಬಣ್ಣದ ಜ್ವಾಲಾಮುಖಿಯನ್ನು ಹೊರ ಚಿಮ್ಮುತ್ತವೆ. ಅಷ್ಟೇ ಅಲ್ಲದೆ ಈ ಜ್ವಾಲಾಮುಖಿಯ ಹೊಗೆಯು ಕೂಡ ನೀಲಿ ಬಣ್ಣದಲ್ಲಿದೆ. ಈ ಪರ್ವತಗಳು ಚಿಮ್ಮುವ ಜ್ವಾಲೆಯು 5 ಮೀಟರ್ ಎತ್ತರದವರೆಗೂ ಚಿಮ್ಮುತ್ತದೆ. ಜ್ವಾಲಾಮುಖಿಯಲ್ಲಿರುವ “ಸಲ್ಫ್ಯೂರಿಕ್ ಆಸಿಡ್” ಬರೋಬ್ಬರಿ 600 ಡಿಗ್ರೀ ಉಷ್ಣಾಂಶವಿರುವ ಗಾಳಿಯ ಜೊತೆಗೆ ಬೇರೆತಾಗ ಈ ರೀತಿ ನೀಲಿ ಬಣ್ಣಕ್ಕೆ ಪರಿವರ್ತನೆಯಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಈ ನೀಲಿ ಬಣ್ಣದ ಜ್ವಾಲೆಯು ರಾತ್ರಿಯ ವೇಳೆಯಲ್ಲಿ ಮಾತ್ರ ಕಾಣಿಸುತ್ತದೆ. ಅದನ್ನು ನೋಡುತ್ತಿದ್ದರೆ ನಾವು ಭೂಮಿಯ ಮೇಲೆ ಇರುವೆವೋ ಅಥವ ಬೇರೆ ಗ್ರಹದಲ್ಲಿ ಇರುವೆವೋ ಎನ್ನುವ ಪ್ರಶ್ನೆ ಕಾಡುತ್ತದೆ.
2) ಕಟಟುಂಬೊ ಮಿಂಚುಗಳು – Catatumbo lightening
ದಕ್ಷಿಣ ಅಮೆರಿಕದ ಭಾಗದಲ್ಲಿ “ವೆನಿಜುಎಲಾ” ಎನ್ನುವ ದೇಶವಿದೆ. ಕೆರೆಬಿಯನ್ ಸಾಗರಕ್ಕೆ ಅಂಟಿಕೊಂಡಿರುವ ಈ ದೇಶದಲ್ಲಿ “ಮರಕೈಬೋ ಬೀಕನ್” ಎನ್ನುವ ಸ್ಥಳವಿದೆ. ಈ ಸ್ಥಳದಲ್ಲಿ ಚಂಡಮಾರುತದ ಬೃಹತ್ ಮೋಡಗಳು ಭೂಮಿಯಿಂದ 1 ಕಿಲೋಮೀಟರ್ ಎತ್ತರದಲ್ಲಿ ಇದ್ದು ಅವುಗಳಿಂದ ಸದಾ ಮಿಂಚು ಬರುತ್ತಲೇ ಇರುತ್ತವೆ. ಇಲ್ಲಿ ಅದೆಷ್ಟು ಮಿಂಚು ಬೀಳುತ್ತಿರುತ್ತದೆ ಎಂದರೆ ಗಂಟೆಗೆ ಬರೋಬ್ಬರಿ 280 ಬಾರಿಯ ಹಾಗೆ ದಿನಕ್ಕೆ 10 ಗಂಟೆಗಳ ಕಾಲದಂತೆ ವರ್ಷದ 365 ದಿನಗಳಲ್ಲಿ 140 ರಿಂದ 160 ದಿನಗಳು ಕೇವಲ ಮಿಂಚಿನಿಂದ ಕೂಡಿರುತ್ತದೆ. ತೇವಾಂಶವು ಗಾಳಿಯ ಜೊತೆ ಬೆರೆತಾಗ ಈ ರೀತಿಯಾಗಿ ಮಿಂಚುಗಳು ಬರುತ್ತವೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ರೀತಿಯಾಗಿ ಭೂಮಿಯ ಮೇಲೆ ಬೇರೆಲ್ಲೂ ಆಗುವುದಿಲ್ಲ.
3) ಹೊಕೈಡೋದ ನೀಲಿ ಕೊಳ – Blue pond of hokkaido
ಈ ಕೊಳವು ಜಪಾನ್ ದೇಶದಲ್ಲಿದೆ. “Biei” ಎನ್ನುವ ನಗರದ ಬಳಿ ಜಪಾನಿನ ಪ್ರಸಿದ್ದ ಜ್ವಾಲಾಮುಖಿ ಪರ್ವತವಾದ “ಮೌಂಟ್ ತೊಕಾಚಿ” ಇದೆ. ಪ್ರತಿ ಬಾರಿ ಈ ಜ್ವಾಲಾಮುಖಿ ಪರ್ವತವು ಜ್ವಾಲೆಯನ್ನು ಹೊರ ಚಿಮ್ಮಿದಾಗ ಅದು “biei” ನಗರದವರೆಗು ಹಬ್ಬುತ್ತಿತ್ತು. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಖಂಡಿತವಾಗಿ “biei” ನಗರದ ವಿನಾಶವಾಗುತ್ತದೆ ಎಂದು ಅರಿತ ಜಪಾನ ಸರ್ಕಾರ 1988 ರಲ್ಲಿ ಒಂದು ಕೊಳವನ್ನು ನಿರ್ಮಿಸಿತು. ಪ್ರತಿ ಬಾರಿ ಜ್ವಾಲೆಯು ಹೊರಚಿಮ್ಮಿದಾಗ ಅದು ಈ biei ನಗರಕ್ಕೆ ಬರುವ ದಾರಿಯಲ್ಲಿ ಇರುವ ಈ ಕೊಳಕ್ಕೆ ಸೇರುತ್ತದೆ. ಇದರಿಂದ “biei” ನಗರದವರೆಗು ಜ್ವಾಲೆಯು ಹಬ್ಬುವುದಿಲ್ಲ. ಆದರೆ ಅಚ್ಚರಿಯ ಸಂಗತಿ ಏನೆಂದರೆ ಜ್ವಾಲೆಯು ಈ ಕೊಳದಲ್ಲಿ ಸೇರುತ್ತಿರುವುದರಿಂದ ಈ ಕೊಳದಲ್ಲಿರುವ ನೀರಿನ ಬಣ್ಣ ಮೂರು ತಿಂಗಳಿಗೊಮ್ಮೆ ಬದಲಾಗುತ್ತದೆ. ಒಮ್ಮೆ ನೀಲಿ ಬಣ್ಣದಲ್ಲಿ ಇದ್ದರೆ ಮತ್ತೊಮ್ಮೆ ಹಸಿರು ಬಣ್ಣಕ್ಕೆ ತಿರುಗುತ್ತದೆ. ಜ್ವಾಲಾಮುಖಿಯಲ್ಲಿ ಇರುವ “ಅಲ್ಯುಮೀನಿಯಮ್ ಹೈಡ್ರಾಕ್ಸೈಡ್” ಕಣಗಳು ನೀರಿನ ಜೊತೆಗೆ ಸೇರಿದಾಗ ಈ ರೀತಿ ಬಣ್ಣ ಬದಲಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದನ್ನು ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ.
4) ಮೌಂಟ್ ರೊರೈಮಾ – Mount Roraima
“ವೆನೆಜುವೆಲ, ಗಯಾನ ಮತ್ತು ಬ್ರೇಜಿಲ್” ದೇಶದ ಗಡಿ ಭಾಗದಲ್ಲಿ ಇರುವ ಈ ಪರ್ವತವು 2 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದೆ. ಸಮುದ್ರಮಟ್ಟದಿಂದ 9000 ಫೂಟ್ ಗಳಷ್ಟು ಎತ್ತರವಿರುವ ಈ ಪರ್ವತ ಶ್ರೇಣಿಗಳನ್ನು ಏರಿದ ಮೇಲೆ ಮೋಡಗಳನ್ನು ಸುಲಭವಾಗಿ ಮುಟ್ಟಬಹುದು. ಭೂಮಿಯ ಬೇರೆ ಯಾವ ಭಾಗದಲ್ಲೂ ಕಾಣದ ಹೂವುಗಳನ್ನು ಇದರ ಮೇಲೆ ಕಾಣಬಹುದು. ಇದಷ್ಟೇ ಅಲ್ಲದೆ ಇದರ ಮೇಲೆ ವಿಧವಿಧವಾದ ಬಣ್ಣಗಳಿಂದ ಕೂಡಿರುವ ಕಲ್ಲುಗಳನ್ನು ಕೂಡ ಕಾಣಬಹುದು. ಇಲ್ಲಿ ವರ್ಷದ 365 ದಿನ ಮಳೆ ಬರುತ್ತಲೇ ಇರುತ್ತದೆ. ಕೆಲವರು ಇದು ದೇವರ ದ್ಯಾನ ಮಾಡುವ ಪವಿತ್ರ ಸ್ಥಳ ಎಂದು ನಂಬಿದ್ದರೆ ಮತ್ತೆ ಕೆಲವರು ಇದು ಅನ್ಯಗ್ರಹದ ಜೀವಿಗಳು ಭೂಮಿಯ ಮೇಲೆ ತಮಗಾಗಿ ನಿರ್ಮಿಸಿಕೊಂಡಿರುವ ಸ್ಥಳ ಎಂದು ನಂಬಿದ್ದಾರೆ.
5) ಪೆಟ್ರಿಫಯಿಂಗ್ ವೆಲ್ – The Petrifying well
ಇಂಗ್ಲೆಂಡ್ ದೇಶದ “knaresborough” ನಗರದ ಬಳಿ ಇರುವ ಈ ಅಚ್ಚರಿಯ ಕಲ್ಲಿನ ಕೆಳಗೆ ಯಾವುದೇ ವಸ್ತುವನ್ನು ಕೆಲವು ವಾರ ಅಥವ ತಿಂಗಳು ಇಟ್ಟರೆ ಅದು ಕಲ್ಲಾಗಿ ಪರಿವರ್ತನೆಯಾಗುತ್ತದೆ. ಈ ಕಲ್ಲಿನ ಮೇಲೆ ಬೀಳುವ ನೀರು ಕಲ್ಲಿನ ಕೆಳಗೆ ಇಟ್ಟಿರುವ ವಸ್ತುವಿನ ಮೇಲೆ ಬಿದ್ದಾಗ ಆ ವಸ್ತುವು ಕಲ್ಲಾಗಿ ಮಾರ್ಪಾಡುತ್ತದೆ. ಇದಕ್ಕೆ ಕಾರಣವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದಾಗ ಕಲ್ಲಿನ ಮೇಲೆ ಬೀಳುವ ನೀರು ಕಲ್ಲಿನಲ್ಲಿರುವ ಕೆಲವು ಮಿನರಲ್ ಅಂಶಗಳನ್ನು ತನ್ನ ಜೊತೆಗೆ ಎಳೆದುಕೊಂಡು ಹೋಗಿ ವಸ್ತುವಿನ ಮೇಲೆ ಬೀಳುವುದರಿಂದ ಈ ರೀತಿ ಆಗುತ್ತದೆ ಎಂದು ತಿಳಿದರು. ಇದು 1630 ರಿಂದಲು ಇದ್ದು ಇದನ್ನು ನೋಡಲು ಜಗತ್ತಿನೆಲ್ಲೆಡೆಯಿಂದ ಜನರು ಬರುತ್ತಾರೆ.
6) ಮೋವಿಲಾ ಗುಹೆ – Movile Cave
ರೋಮಾನಿಯ ದೇಶದ ಕಪ್ಪು ಸಮುದ್ರದ ಬಳಿ ಇರುವ ಈ ಗುಹೆಯೂ 2 ಮಿಲಿಯನ್ ವರ್ಷಗಳಿಂದ ಸೂರ್ಯನ ಬೆಳಕು ನೋಡಿಲ್ಲ. ಈ ಬೃಹತ್ ಗುಹೆಯಲ್ಲಿ ವಿಷಕಾರಿ ಗಾಳಿ ತುಂಬಿದ್ದು ಇದರ ಒಳಗೆ ಉಸಿರಾಡಲು ಸಾಧ್ಯವಿಲ್ಲ. ಅಚ್ಚರಿ ಏನೆಂದರೆ ಇದರ ಒಳಗೆ ಈ ವಿಷಕಾರಿ ಅನಿಲವನ್ನು ಸೇವಿಸಿ ಬದುಕುತ್ತಿರುವ ಜೀವಿಗಳು ವಾಸಿಸುತ್ತಿವೆ. ಭೂಮಿಯ ಮೇಲೆ ಎಲ್ಲೂ ಇರದಂತಹ ಜೀವಿಗಳು ಈ ಗುಹೆಯ ಒಳಗೆ ಇವೆ.
7) ನರಕದ ಬಾಗಿಲು – Door to hell
“Turkmenistan” ದೇಶದ ಬಳಿ ಇರುವ ಈ ಸ್ಥಳವನ್ನು ಆಕಸ್ಮಿಕವಾಗಿ ಮನುಷ್ಯನು ನಿರ್ಮಿಸಿದ್ದಾನೆ. 1971 ರಲ್ಲಿ ಈ ಸ್ಥಳದಲ್ಲಿ ತೈಲವಿದೆ ಎಂದು ಬೃಹತ್ ರಂದ್ರವನ್ನು ಕೊರೆಯುವ ವೇಳೆ ರಂದ್ರ ಕೊರೆಯುವ ಯಂತ್ರವು ಸ್ಫೋಟವಾಗಿ ವಿಷಕಾರಿ “ಮೀತೇನ್ ಅನಿಲ” ಹೊರ ಚಿಮ್ಮುತ್ತಿತ್ತು. ಹೇಗಾದರೂ ಮಾಡಿ ಇದು ಎಲ್ಲೆಡೆ ಹರಡದಿರಲಿ ಎಂದು ಅಲ್ಲಿದ್ದ ಎಂಜಿನಿಯರ್ ಗಳು ಆ ಯಂತ್ರವನ್ನು ಬೆಂಕಿ ಹಾಕಿ ಸುಟ್ಟರು. ಕೆಲ ಗಂಟೆಗಳ ಕಾಲ ಬೆಂಕಿ ಆರುತ್ತದೆ ಎಂದು ತಿಳಿದಿದ್ದ ಎಂಜಿನಿಯರ್ ಗಳು ಎಷ್ಟೇ ದಿನ ಕಾದರು ಕೂಡ ಬೆಂಕಿ ಮಾತ್ರ ಉರಿಯುತ್ತಲೇ ಇತ್ತು. ಇಂದಿಗೆ 49 ವರ್ಷಗಳೇ ಕಳೆಯಿತು ಆದರೆ ಬೆಂಕಿ ಮಾತ್ರ ಈಗಲೂ ಉರಿಯುತ್ತಿದೆ. ಇದನ್ನು ನೋಡಲು ಅನೇಕ ಪ್ರವಾಸಿಗರು ಬರುತ್ತಿದ್ದು ಅಲ್ಲಿನ ಸರ್ಕಾರ ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಿದೆ.
Follow Karunadu Today for more Interesting Facts & Stories.
Click here to Join Our Whatsapp Group