
"ಸ್ಪೂರ್ತಿ ಕಥೆಗಳು"
ಪ್ರಯತ್ನವಿಲ್ಲದೆ ಫಲವಿಲ್ಲ ಎಂಬ ಮಾತು ಸತ್ಯ ಏಕೆಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಾವು ಮಾಡುವ ಕೆಲಸದಲ್ಲಿ ಪ್ರಯತ್ನ ನಿರಂತರವಾಗಿರಬೇಕು ಅಂದಾಗ ಮಾತ್ರ ನಮಗೆ ಯಶಸ್ಸು ದೊರಕುತ್ತದೆ. ನಮ್ಮಿಂದ ಯಾವುದೇ ರೀತಿಯ ಪ್ರಯತ್ನವಿಲ್ಲದೆ ಹೋದರೆ ಯಾವುದೇ ರೀತಿಯ ಫಲ ನಮಗೆ ಸಿಗುವುದಿಲ್ಲ.
ಇಂದಿನ ವಿಷಯದಲ್ಲಿ ನಾವು ಪ್ರಯತ್ನವಿಲ್ಲದೆ ಫಲವಿಲ್ಲ ಎಂಬ ಮಾತಿಗೆ ಒಂದು ಉದಾಹರಣೆ ಮೂಲಕ ತಿಳಿದುಕೊಂಡು ಬರೋಣ ಬನ್ನಿ.
ಸೋಮನಾಥಪುರ ಎಂಬ ಹಳ್ಳಿಯ ಒಂದು ಶಾಲೆಯಲ್ಲಿ 10ನೇ ತರಗತಿ ಓದುವ ಇಬ್ಬರು ಸ್ನೇಹಿತರು ಇದ್ದರು, ಅವರ ಹೆಸರು ಸುರೇಶ್ ಹಾಗೂ ಮಹೇಶ್. ಮಹೇಶ್ ಎಂಬ ವಿದ್ಯಾರ್ಥಿ ಓದುವ ವಿಷಯದಲ್ಲಿ ಬಹಳ ಬುದ್ದಿವಂತ ಹಾಗೂ ಶಿಕ್ಷಕರು ಕೇಳುವ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ, ಆದರೆ ಸುರೇಶ ಎಂಬ ವಿದ್ಯಾರ್ಥಿ ಓದುವ ವಿಷಯದಲ್ಲಿ ದಡ್ಡನಾಗಿದ. ಒಂದು ದಿನ ಆ ಊರಿನಲ್ಲಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿರುತ್ತದೆ ಆಗ ಆ ಜಾಗಕ್ಕೆ ಭೇಟಿ ನೀಡಿದ ಜಗದ್ಗುರುವೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು. ಹಾಗಾಗಿ ಆ ಊರು ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಜನರು ಅವರಲ್ಲಿಗೆ ಬಂದು ತಮ್ಮ ಭವಿಷ್ಯ ಕೇಳುತ್ತಿದ್ದರು. ಆ ಜಗದ್ಗುರು ಕೂಡ ಯಾರು ಬಂದರೂ ಸ್ವಲ್ಪವೂ ಬೇಸರ ಪಡದೆ ಹಸನ್ಮುಖಿಯಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.
ಒಮ್ಮೆ ಸುರೇಶ ಮತ್ತು ಮಹೇಶ ಇಬ್ಬರು ಜಗದ್ಗುರುವಿನ ಬಳಿಗೆ ಬಂದು ‘ಗುರುಗಳೇ, ನಾವಿಬ್ಬರು ಗೆಳೆಯರು. ಒಂದೇ ಶಾಲೆಯಲ್ಲಿ ಓದುತ್ತಿದ್ದೇವೆ. ನಮಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಹೇಳಿ ತಲೆ ಬಾಗಿದರು. ಜಗದ್ಗುರು ಅವರಿಬ್ಬರನ್ನೂ ಒಂದು ಕ್ಷಣ ತದೇಕ ಚಿತ್ತದಿಂದ ನೋಡಿ ಮಹೇಶನಿಗೆ ‘ನೀನು ಒಳ್ಳೆಯ ಅಂಕ ಗಳಿಸಿ ಪರೀಕ್ಷೆಯಲ್ಲಿಪ್ರಥಮ ದರ್ಜೆಯಲ್ಲಿಪಾಸಾಗುವೆ’ ಎಂದು ಹಾಗೂ ಸುರೇಶನಿಗೆ ನೀನು ಪರೀಕ್ಷೆಯಲ್ಲಿಫೇಲಾಗುವೆ’ ಎಂದರು.
ಇದರಿಂದ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ ಜಗದ್ಗುರುಗಳ ಮಾತನ್ನೇ ನಂಬಿ ಸಿನಿಮಾ, ಟೀವಿ, ಜಾತ್ರೆ ಹಬ್ಬ ಊರೂರು ಅಲೆದ. ಆರಾಮವಾಗಿ ಆಟವಾಡಿಕೊಂಡು ಪಾಠ ಮರೆತ. ಪುಸ್ತಕ ತೆರೆಯುವ ಗೋಜಿಗೇ ಹೋಗದೆ ಓದುವ ವಿಷಯದಲ್ಲಿಮಹಾ ಸೋಮಾರಿಯಾದ. ಆದರೆ ಸುರೇಶ ತಾನು ಫೇಲಾಗುತ್ತೇನೆ ಎಂದು ಹೇಳಿದ ಜಗದ್ಗುರುವಿನ ಮಾತನ್ನು ನಂಬದೆ ಅವರ ಮಾತನ್ನು ಸುಳ್ಳು ಮಾಡಲು ನಿರ್ಧರಿಸಿದ. ತನ್ನ ಓದಿನ ಮೇಲೆ ನಂಬಿಕೆಯಿಟ್ಟು ಒಂದು ದಿನವೂ ಯಾವ ಊರಿಗೂ ಹೋಗದೆ, ಅಲ್ಲಿಇಲ್ಲಿ, ಹಬ್ಬ ಜಾತ್ರೆ ಎಲ್ಲೂ ಅಲೆಯಲಿಲ್ಲ. ಸತತವಾಗಿ ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದ. ಓದಿದ್ದನ್ನು ಅಷ್ಟೇ ಆಸಕ್ತಿಯಿಂದ ಮನವರಿಕೆ ಮಾಡಿಕೊಂಡ.
ಒಂದೆರಡು ತಿಂಗಳಲ್ಲಿ ಪರೀಕ್ಷೆ ಬಂತು. ಮಹೇಶ ಮತ್ತು ಸುರೇಶ ಪರೀಕ್ಷೆ ಬರೆದರು. ಕೆಲವೇ ದಿನಗಳಲ್ಲಿಫಲಿತಾಂಶವೂ ಬಂತು. ಆದರೆ ಜಗದ್ಗುರು ಪ್ರಥಮ ದರ್ಜೆಯಲ್ಲಿಪಾಸಾಗುವುದಾಗಿ ಹೇಳಿದ್ದ ಮಹೇಶ ಅತ್ಯಂತ ಕಡಿಮೆ ಅಂಕ ಪಡೆದು ಫೇಲಾಗಿದ್ದ. ಹಾಗೆಯೇ ಜಗದ್ಗುರು ಫೇಲಾಗುವುದಾಗಿ ಹೇಳಿದ್ದ ಸುರೇಶ ಅತ್ಯಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿಪಾಸಾಗಿದ್ದ. ಇದರಿಂದ ಕುಪಿತಗೊಂಡ ಮಹೇಶ ಸರಸರನೆ ಆಶ್ರಮಕ್ಕೆ ಹೋಗಿ ಜಗದ್ಗುರುವಿಗೆ ‘ನೀವು ಪಾಸಾಗುವೆ ಎಂದು ಆಶೀರ್ವಾದ ಮಾಡಿದ್ದ ನಾನು ಫೇಲಾಗಿದ್ದೇನೆ. ನೀವು ಫೇಲಾಗುವುದಾಗಿ ಹೇಳಿದ್ದ ಸುರೇಶ ಪಾಸಾಗಿದ್ದಾನೆ. ನಮ್ಮಿಬ್ಬರ ವಿಷಯದಲ್ಲಿನೀವು ಹೇಳಿದ ಮಾತು ಸುಳ್ಳಾಯಿತು. ಏಕೆ ಹೀಗಾಯಿತು? ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ’ ಎಂದು ಬೇಸರ ವ್ಯಕ್ತಪಡಿಸಿದ.
ಆಗ ಜಗದ್ಗುರು ಸಾವಧಾನದಿಂದ ‘ನೀನು ನನ್ನ ಮಾತನ್ನು ಮಾತ್ರ ನಂಬಿ ಓದುವುದರತ್ತ ನಿನ್ನ ಪ್ರಯತ್ನ ಮಾಡಲೇ ಇಲ್ಲ. ಶಕ್ತಿಯಿದ್ದೂ 2. ನೀನು ಶಕ್ತಿಹೀನನಾದೆ. ಪ್ರಯತ್ನವಿಲ್ಲದೆ ಎಂದೂ ಫಲ ದೊರೆಯದು. ಸುರೇಶ ನನ್ನ ” ಮಾತನ್ನು ಲೆಕ್ಕಿಸದೆ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಸತತವಾಗಿ ಕಷ್ಟಪಟ್ಟು ಓದಿದ. ಹಾಗಾಗಿ ಅವನು ನಿನ್ನಷ್ಟು ಬುದ್ದಿವಂತನಲ್ಲದಿದ್ದರೂ ಪ್ರಯತ್ನಪಟ್ಟು ಅಧ್ಯಯನ ಮಾಡಿದ್ದರಿಂದ ಅವನಿಗೆ ಉತ್ತಮ ಫಲಿತಾಂಶ ಬಂತು. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆಂಬ ಮಾತನ್ನು ಆತ ನಿಜ ಮಾಡಿದ್ದಾನೆ’ ಎಂದರು.
ಆಗ ಮಹೇಶನಿಗೆ ತಾನು ಎಡವಿದ್ದೆಲ್ಲಿಎಂದು ಅರಿವಾಯಿತು. ಯಾರ ಆಶೀರ್ವಾದ ಎಷ್ಟೇ ದೊಡ್ಡದಿದ್ದರೂ ಕನಿಷ್ಠ ಚಿಕ್ಕದಾಗಿಯಾದರೂ ನಮ್ಮ ಪ್ರಯತ್ನವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗದು. ದೇವರೇ ನಮ್ಮ ಪರವಾಗಿದ್ದರೂ ಪ್ರಯತ್ನವಿಲ್ಲದೆ ಫಲ ಸಿಗದು. ನಾನು ಅನ್ಯಾಯವಾಗಿ ಒಂದು ವರ್ಷ ಹಾಳು ಮಾಡಿಕೊಂಡೆ ಎಂದು ಆತ ಪಶ್ಚಾತ್ತಾಪಪಟ್ಟು ಮುಂದೆ ಹೀಗಾಗದಂತೆ ಎಚ್ಚರ ವಹಿಸಿದ.
For more Stories follow Karunadu Today
Click here to Join Our Whatsapp Group