ಇಂದಿಗೂ ಅವಳು ಯಾಕೆ ನನ್ನ ಬಿಟ್ಟು ಹೋದಳು ಎಂದು ನನಗೆ ತಿಳಿಯುತ್ತಿಲ್ಲ, ನನಗೆ ಅನ್ನಿಸಿದ ಹಾಗೆ ನನ್ನ ಕಡೆಯಿಂದ ಯಾವ ತರಹದ ತಪ್ಪು ಆಗಿಲ್ಲ. ಕಾರಣ ಕೇಳಿದರೆ ಸರಿಯಾಗಿ ಹೇಳುತ್ತಿಲ್ಲ. ನಿಜವಾಗಿಯೂ ತಪ್ಪು ಮಾಡಿದ್ದರೆ ತಿದ್ದಿಕೊಳ್ಳುವೆ ಆದರೆ ಈ ತರಹ ಹೇಳದೆ ಕೇಳದೆ ನನ್ನನ್ನು ಅವಳು ಬಿಟ್ಟು ಹೋದಳು. ಮೂರು ವರ್ಷಗಳಿಂದ ಪ್ರೀತಿಸುತ್ತಾ ಇದ್ದೆ. ಅವಳೇ ನನಗೆ ಎಲ್ಲಾ ಅಂದುಕೊಂಡು ಬದುಕುತ್ತಿದ್ದೆ. ಅಪ್ಪ ಅಮ್ಮ ಯಾರೂ ಇಲ್ಲದ ನನಗೆ ಇವಳೇ ಜೀವನದ ಸ್ಪೂರ್ತಿಯಾಗಿದ್ದಳು. ಎಷ್ಟೋ ಸಲ ಹರೆದಿರುವ ಬಟ್ಟೆಗಳನ್ನು ನೋಡಿ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಕೊಡಿಸಿ ಇನ್ನೊಮ್ಮೆ ಏನಾದರು ಈ ತರಹದ ಹರೆದಿರುವ ಬಟ್ಟೆಗಳನ್ನು ಹಾಕಿಕೊಂಡರೆ ನನ್ನ ಜೊತೆ ಮಾತಾಡಬೇಡ ಎಂದು ಮುದ್ದು ಮುಖ ಮಾಡಿ ಹೇಳುತ್ತಿದ್ದಳು.

ಊಟಕ್ಕೆ ದುಡ್ಡಿಲ್ಲದೆ ನೀರು ಕುಡಿದು ಎಷ್ಟೋ ಸಲ ಮಲಗುವಾಗ ಕರೆ ಮಾಡಿ ನಿಜವಾಗಿಯೂ ಊಟ ಮಾಡಿದ್ದೀಯೋ ಇಲ್ಲವೋ ನನ್ನ ಮೇಲೆ ಪ್ರಮಾಣ ಮಾಡಿ ಹೇಳು ಎಂದು ಕೇಳಿ ಮನೆಯಿಂದ ಊಟ ತಂದುಕೊಡುತ್ತಿದ್ದಳು.ಇಂಟರ್ವ್ಯೂಗೆ ಹಾಕಿಕೊಂಡು ಹೋಗಲು ಒಳ್ಳೆಯ ಬಟ್ಟೆಗಳು ಇಲ್ಲದೆ ಅಳುತ್ತಾ ಕೂತಿದ್ದಾಗ ಹೊಸ ಬಟ್ಟೆಗಳನ್ನು ಕೊಡಿಸಿ ಹೋಗು ಜೀವನದಲ್ಲಿ ನೀನು ಗೆಲ್ಲುತ್ತೀಯ ಅಳುತ್ತಾ ಕೂಡಬೇಡ ಎಂದು ಧೈರ್ಯ ತುಂಬುತ್ತಿದ್ದಳು.

ಒಬ್ಬರು ಒಳ್ಳೆಯ ಸ್ನೇಹಿತರು ನನಗೆ ಇಲ್ಲ ಎಂದು ಹೇಳಿಕೊಂಡಾಗ ನಾನು ಇಲ್ಲವೇ ನಿನಗೆ, ನಿನ್ನ ಸ್ನೇಹಿತಳು ನಾನೇ ನಿನ್ನ ಕುಟುಂಬವು ನಾನೇ ಎಂದು ಹೇಳುತ್ತಿದ್ದಳು. ಬೆಟ್ಟದ ಮೇಲೆ ಇರುವ ಆಂಜನೇಯ ಸ್ವಾಮಿಯ ದೇವಸ್ತಾನದಲ್ಲಿ ನನ್ನ ಪ್ರೀತಿಯನ್ನು ಮೊದಲ ಬಾರಿಗೆ ತಿಳಿಸಿದಾಗ ಹಿಂದೂ ಮುಂದು ನೋಡದೆ ಒಪ್ಪಿಕೊಂಡು ಸಾಯುವವರೆಗೂ ನಿನ್ನ ಜೊತೆಯಲ್ಲೇ ಇರುವೆ ಎಂದು ಬಾಷೆ ಕೊಟ್ಟಿದ್ದಳು. ಮೊದಲ ಬಾರಿಗೆ ಕೆಲಸದ ಮೇಲೆ ಬೇರೆ ಊರಿಗೆ ಹೋಗುತ್ತಿದ್ದಾಗ ನಿನ್ನನ್ನು ಬಿಟ್ಟು ನನಗೆ ಬದುಕುವ ಶಕ್ತಿ ಇಲ್ಲ ಬೇಗ ಬಾ ಎಂದು ಹೇಳಿದ್ದ ದಿವಸವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ.ಮದುವೆ ಆದ ಮೇಲೆ ನಮ್ಮ ಮನೆ ಈ ತರ ಇರಬೇಕು ಆ ತರ ಇರಬೇಕು ನಾವಿಬ್ಬರು ಜೀವನದಲ್ಲಿ ಗೆದ್ದು ತೋರಿಸಬೇಕು ಎಂದು ಆಡಿದ ಆ ಮಾತುಗಳು ಇನ್ನೂ ಕಿವಿಯಲ್ಲಿ ಗುನುಗುಟ್ಟುತ್ತಿವೆ. ನನ್ನ ಅಪ್ಪ ಯಾವಾಗಲು ಕುಡಿದುಕೊಂಡು ಬಂದು ನನ್ನನ್ನು ಹಾಗೂ ನನ್ನ ಅಮ್ಮನನ್ನು ಹೊಡೆಯುತ್ತಾ ಇರುತ್ತಾನೆ ಎಂದು ಹೇಳಿಕೊಂಡು ಕಣ್ಣೀರು ಇಡುತ್ತಾ ನನ್ನ ಎದೆಯ ಮೇಲೆ ಅವಳು ಮಲಗುತ್ತಿದ್ದ ಆ ದಿವಸಗಳು ಇನ್ನೂ ನೆನಪಿನಲ್ಲಿವೆ.

ಇಂದು ನನ್ನ ಹತ್ತಿರ ಎಲ್ಲಾ ಇದೆ, ಇರುವುದಕ್ಕೆ ದೊಡ್ಡ ಮನೆ, ಓಡಾಡುವುದಕ್ಕೆ ಬೆಲೆಬಾಳುವ ಕಾರ್, ಹಾಕಿಕೊಳ್ಳುವುದಕ್ಕೆ ವಿದವಿದವಾದ ಬಟ್ಟೆಗಳು, ಆಫೀಸಿನಲ್ಲಿ ದೊಡ್ಡ ಹುದ್ದೆ. ಆದರೆ ಅವಳೇ ಇಲ್ಲ. ಅಮ್ಮನಿಗೆ ಹುಷಾರಿಲ್ಲ ಬೇರೆ ಊರಿಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಹೋದವಳು ಇವತ್ತಿಗೂ ತಿರುಗಿ ಬಂದಿಲ್ಲ. ಕರೆ ಮಾಡಿದರೆ ದಯವಿಟ್ಟು ನನ್ನ ಮರೆತುಬಿಡು ಎಂದು ಹೇಳುತ್ತಾಳೆ. ಕಾರಣ ಕೇಳಿದರೆ ದಯವಿಟ್ಟು ಕೇಳಬೇಡ ಎಂದು ಹೇಳುತ್ತಾಳೆ.

ಎಲ್ಲಾ ಹುಡುಗರ ತರಹ ಅವಳಿಗೆ ಮೋಸಗಾತಿ ಪಟ್ಟ ಕಟ್ಟಲು ನನ್ನ ಮನಸ್ಸು ಒಪ್ಪುತ್ತಿಲ್ಲ ಏಕೆಂದರೆ ಇಂದು ನಾನು ಜೀವನದಲ್ಲಿ ಗಳಿಸಿರುವ ಯಶಸ್ಸು ಅವಳಿಂದ ಸಿಕ್ಕಿರುವ ಭಿಕ್ಷೆ. ಅವಳೇ ಇಲ್ಲದ ಮೇಲೆ ಈ ಯಶಸ್ಸನ್ನು ತೆಗೆದುಕೊಂಡು ಏನು ಮಾಡಲಿ. ಅನಾಥನಾದ ನನಗೆ ಕೊನೆಗೆ ಒಂದು ಜೀವವನ್ನಾದರೂ ಆ ದೇವರು ಕೊಟ್ಟಿದ್ದಾನೆ ಎಂದುಕೊಳ್ಳುವಷ್ಟರಲ್ಲಿ ಆ ಜೀವವನ್ನು ಕಿತ್ತುಕೊಂಡ. ನನ್ನ ಜೊತೆ ಅವಳಿದ್ದ ಪ್ರತಿಯೊಂದು ಕ್ಷಣವನ್ನು ನೆನಸಿಕೊಂಡು ಪ್ರತಿದಿನ ಕೊರಗುತ್ತಿದ್ದೇನೆ.ಈ ಜೀವ ಇರುವವರೆಗೂ ಅವಳನ್ನೇ ನೆನೆಯುತ್ತಾ ಇರಬೇಕು ಎಂದು ತೀರ್ಮಾನಿಸಿರುವೆ.

For more Stories follow Karunadu Today

Click here to Join Our Whatsapp Group