ಬಾಲ್ಯದಿಂದಲೂ ಇಬ್ಬರು ಜೊತೆಯಲ್ಲೇ ಬೆಳೆದೆವು. ಅಕ್ಕ ಪಕ್ಕದ ಮನೆ ಬೇರೆ. ನಮ್ಮ ಕುಟುಂಬದ ಸದಸ್ಯರು ಮತ್ತು ಅವನ ಕುಟುಂಬದ ಸದಸ್ಯರು ತುಂಬಾ ಅನ್ಯೋನ್ಯವಾಗಿ ಇದ್ದೆವು. ಒಂದೇ ಶಾಲೆಯಲ್ಲಿ ಇಬ್ಬರು ಓದುತ್ತಿದ್ದೆವು. ಶಾಲೆಯಲ್ಲಿ ನಮ್ಮಿಬ್ಬರ ಸ್ನೇಹ ಕಂಡು ಹೊಟ್ಟೆ ಉರಿದುಕೊಳ್ಳುತ್ತಿದ್ದವರು ಜಾಸ್ತಿ. ಎಲ್ಲೇ ಹೋದರೂ ಲವ ಕುಶ ಬಂದ್ರು ಅಂತ ರೇಗಿಸುತ್ತಿದ್ದರು. ಕಬ್ಬಡ್ಡಿ ತಂಡದಲ್ಲಿ ನನಗೆ ಸ್ಥಾನ ಸಿಗಲಿಲ್ಲವೆಂದು ಸಿಕ್ಕ ಸ್ತಾನವನ್ನು ಬಿಟ್ಟು ಕೊಟ್ಟ ಅವನು. ಪರೀಕ್ಷೆ ಹತ್ತಿರ ಬಂದಾಗ ಜೊತೆಯಲ್ಲೇ ಓದುತ್ತಿದ್ದೆವು. ನನಗೆ ಕಡಿಮೆ ಅಂಕಗಳು ಬಂದಿದೆ ಎಂದು ತನಗೆ ಹೆಚ್ಚು ಅಂಕ ಬಂದಿದ್ದರೂ ಖುಷಿ ಪಡುತ್ತಿರಲಿಲ್ಲ.

ಒಮ್ಮೊಮ್ಮೆ ಮಧ್ಯಾನ್ಹದ ಊಟ ಸರಿ ಇಲ್ಲವೆಂದು ಬೇಸರದಿಂದ ಕೂತಿದ್ದಾಗ ತನ್ನ ಬಳಿ ಇದ್ದ ಊಟವನ್ನು ನೀಡುತ್ತಿದ್ದ. ಶಾಲೆಯ ದಿನಗಳನ್ನು ಕಳೆದು ಮುಂದೆ ಯಾವ ಕಾಲೇಜಿಗೆ ಸೇರಬೇಕು ಎಂದು ತಲೆ ಕೆಡಿಸಿಕೊಂಡು ಕುಳಿತಿದ್ದಾಗ ನೀನು ಯಾವ ಕಾಲೇಜಿಗೆ ಸೇರುತ್ತೀಯೋ ಅದೇ ಕಾಲೇಜಿಗೆ ಸೇರುತ್ತೇನೆ, ಹೊಸ ಸ್ನೇಹಿತರು ಯಾರೂ ಬೇಡ ನೀನೊಬ್ಬನೇ ಸಾಕು ಎಂದು ಹೇಳಿದ್ದ.

ಕಾಲೇಜಿನಲ್ಲಿ ಮೊದಲ ದಿನ ನಮ್ಮ ಸೀನಿಯರ್ ಹುಡುಗರು ನನ್ನನ್ನು ರೇಗಿಸಿದ್ದಾಗ ಅವರ ಜೊತೆ ಜಗಳ ಕಾದಿದ್ದ. ಅಂದೇ ಕೊನೆ ಯಾರೂ ನಮ್ಮಿಬ್ಬರನ್ನು ಕೆಣಕೋ ಸಾಹಸ ಮಾಡಲಿಲ್ಲ. ಜೊತೆಯಲ್ಲಿ ಸಿನೆಮಾಗೆ ಹೋಗುತ್ತಿರುವಾಗ ಬೈಕ್ ಅನ್ನು ಪೊಲೀಸರು ಹಿಡಿಯಲು ಪ್ರಯತ್ನ ಮಾಡಿದಾಗ ಅವರ ಕೈಯಿಂದ ತಪ್ಪಿಸಿಕೊಂಡ ಆ ಕ್ಷಣಗಳನ್ನು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.ಊರ ಹೊರಗಡೆ ಇರುವ ಬಾವಿಯಲ್ಲಿ ಇಬ್ಬರು ಈಜಲು ಹೋದಾಗ ನನ್ನನ್ನು ಪ್ರಾಣಾಪಾಯದಿಂದ ಕಾಪಾಡಿದ್ದ ದೇವರು ನೀನು. ನಾನು ಹೊಸ ಮೊಬೈಲ್ ಅನ್ನು ತೆಗೆದುಕೊಂಡಾಗ ಇಬ್ಬರೂ ಜೊತೆಯಲ್ಲಿ ತೆಗೆದುಕೊಂಡ ಫೋಟೋವನ್ನು ನೋಡಿದಾಗಲೆಲ್ಲ ಕಣ್ಣೀರು ಬರುತ್ತದೆ. ನನ್ನ ತಂದೆಗೆ ಆಕ್ಸಿಡೆಂಟ್ ಆದಾಗ ನಿನ್ನ ಬಳಿಯಿದ್ದ ಚಿನ್ನದ ಉಂಗುರವನ್ನು ಮಾರಿ ಬಂದ ಹಣವನ್ನು ಆಸ್ಪತ್ರೆಗೆ ಕಟ್ಟಲೆಂದು ನನಗೆ ಕೊಡಲು ಬಂದಾಗ ನಿನ್ನ ತಬ್ಬಿಕೊಂಡು ಕಣ್ಣೀರಿಟ್ಟ ದಿನವನ್ನು ಎಂದಿಗೂ ಮರೆಯುವುದಿಲ್ಲ.

ಇಬ್ಬರು ದೂರದ ಮೈಸೂರಿಗೆ ಟ್ರಿಪ್ ಹೋದ ದಿನಗಳು ಮತ್ತೆ ತಿರುಗಿ ಬರುವುದಿಲ್ಲ ಎನ್ನುವ ವಿಷಯವನ್ನು ನೆನೆದರೆ ದುಃಖ ಉಕ್ಕಿ ಬರುತ್ತಿದೆ. ಇಂದು ನೀನು ಬದುಕಿದ್ದರೆ ನಮ್ಮ ಸ್ನೇಹಕ್ಕೆ 22 ವರ್ಷಗಳು ತುಂಬುತ್ತಿದ್ದವು. ಬೇಡ ಬೇಡ ಎಂದರೂ ಒಂದೇ ಒಂದು ಸಲ ಹೋಗಿ ಬರೋಣ ಬಾ ಎಂದು ಕರೆದುಕೊಂಡು ಹೋದೆ. ಹೊಸದಾಗಿ ಮಾಡಿರುವ ರಸ್ತೆಯೆಂದು ತುಂಬಾ ಖುಷಿಯಿಂದ ಜೋರಾಗಿ ಬೈಕ್ ಚಲಾಯಿಸಿದೆ. ಕನ್ನಡಿಯಲ್ಲಿ ನಿನ್ನ ನಗುವನ್ನು ನೋಡುತ್ತಾ ನಾನೂ ನಗಲು ಶುರುಮಾಡಿದೆ. ಅದೇ ಕೊನೆಯ ಬಾರಿ ನಿನ್ನ ಮುಖವನ್ನು ನೋಡಿದ್ದು. ಎದುರುಗಡೆ ಬಂದ ನಾಯಿಯನ್ನು ಕಾಪಾಡಲು ಹೋಗಿ ಇಬ್ಬರು ಬೈಕ್ ಮೇಲಿಂದ ಬಿದ್ದೆವು. ಬಿದ್ದ ರಬಸಕ್ಕೆ ಅರ್ಧ ಮೈಲಿಯಷ್ಟು ದೂರ ಹೋಗಿ ಬಂಡೆಗೆ ನಿನ್ನ ತಲೆ ಬಡೆದು ಪ್ರಾಣ ಬಿಟ್ಟೆ. ನಿನ್ನ ಹತ್ತಿರ ಬರುವಷ್ಟು ಶಕ್ತಿ ಇಲ್ಲದೆ ವಿಲ-ವಿಲ ಒದ್ದಾಡುತ್ತಾ ನಾನು ಮೂರ್ಚೆ ಹೋದೆ.

ಕಣ್ಣು ಬಿಟ್ಟು ನೋಡಿದರೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದೆ. ಕಣ್ಣು ಬಿಟ್ಟ ಕ್ಷಣ ಪಕ್ಕದಲ್ಲಿ ನಿಂತಿದ್ದ ನನ್ನ ತಂದೆಯನ್ನು ಕಿಶೋರನು ಎಲ್ಲಿ? ಎಂದು ಕೇಳಿದೆ. ಅಪ್ಪನು ತನ್ನ ಕಣ್ಣೀರಿನ ಮುಖಾಂತರ ಉತ್ತರ ಕೊಟ್ಟ. ಅದನ್ನು ಕೇಳಿ ನಾನೊಬ್ಬ ಏಕೆ ಬದುಕಿ ಉಳಿದೆ ದೇವರೇ ಎಂದು ಪ್ರಶ್ನೆ ಕೇಳಿಕೊಂಡೆ. ಸ್ವಂತ ತಮ್ಮನಿಗಿಂತ ಜಾಸ್ತಿ ಪ್ರೀತಿ ಮಾಡುತ್ತಿದ್ದ ಅವನು ಇಂದು ನನ್ನ ಜೊತೆಯಲ್ಲಿ ಇಲ್ಲ. ಮುಂದಿನ ತಿಂಗಳು ಅವನ ಹುಟ್ಟಿದ ಹಬ್ಬ. ಆದರೆ ಅವನೇ ಇಲ್ಲ. ನನಗೆ ಮದುವೆ ಆದ ಮೇಲೆ ಮಗ ಹುಟ್ಟಿದರೆ ಅವನಲ್ಲಿ ಇವನನ್ನು ಕಾಣುವೆ. ಇಂದು ಅವನು ನನ್ನ ಜೊತೆ ಇಲ್ಲದಿರಬಹುದು ಆದರೆ ಅವನ ನೆನಪುಗಳು ಮಾತ್ರ ಈ ಉಸಿರು ಇರುವ ತನಕ ಇರುತ್ತದೆ.

For more Stories follow Karunadu Today

Click here to Join Our Whatsapp Group