
ಎಷ್ಟೇ ಶ್ರೀಮಂತರಾದರು ಹಣ ಎಲ್ಲಿ ಮತ್ತು ಹೇಗೆ ಬಳಸಬೇಕು ಎಂದು ಗೊತ್ತಿರದಿದ್ದರೆ ಹೇಗೆ ಪರಿತಪಿಸುತ್ತಾನೋ ಅದೇ ರೀತಿ ಬಡವ ತನ್ನ ತಾಳ್ಮೆ ಕಳೆದು ಕೊಂಡರೆ ಏನು ಸಾಧಿಸಲಾಗುವುದಿಲ್ಲ. ಜೀವನದಲ್ಲಿ ಅತ್ಯಂತ ಮುಖ್ಯವಾಗಿರುವುದು “ತಾಳ್ಮೆ”, ಅದು ಯಾಕೆ ಎಂದು ಇದನ್ನು ಓದಿದ ನಂತರ ಖಂಡಿತ ತಿಳಿಯುತ್ತದೆ.
ಒಂದೂರಿನಲ್ಲಿ ರೈತನೊಬ್ಬ ತಾನು ಬೆಳೆದ ಬೆಳೆಗಳನ್ನು ಒಳ್ಳೆಯ ಬೆಲೆಗೆ ಮಾರಿದ, ಅವನು ಬೆಳೆದ ಬೆಳೆಗಳಿಗೆಲ್ಲ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ರೈತ ಖುಷಿಯಾಗಿ ಮನೆಗೆ ಬೇಕಿದ್ದ ಎಲ್ಲ ವಸ್ತುಗಳನ್ನು ಕೊಂಡುಕೊಂಡ. ಕೊನೆಗೆ ಮನೆಗೆ ಹೋಗುವಾಗ ಒಂದು ಕೈಗಡಿಯಾರ ಅಂಗಡಿಯನ್ನು ನೋಡಿದ ಅದರಲ್ಲೊಂದು ವಾಚ್ ತುಂಬಾ ಆಕರ್ಷಕವಾಗಿತ್ತು, ರೈತನಿಗೆ ಅದರ ಮೇಲೆ ಮನಸ್ಸಾಯಿತು.

ರೈತ ಆ ಅಂಗಡಿಗೆ ಹೋಗಿ ಆ ಕೈಗಡಿಯಾರವನ್ನು ಕೊಳ್ಳಲು ಮುಂದಾದ, ಆದರೆ ಅದು ತುಂಬಾ ದುಬಾರಿ ವೆಚ್ಚದ ವಾಚ್ ಆಗಿತ್ತು, ಹೇಗೂ ಹಣವಿದ್ದ ಕಾರಣ ಅದನ್ನು ಖರೀದಿಸಿಯೇ ಬಿಟ್ಟ. ಮನೆಗೆ ಹೋಗಿ ಎಲ್ಲರಿಗೂ ತೋರಿಸಿದ ಎಲ್ಲರೂ ಖುಷಿಯಾದರು, ನಿತ್ಯ ಕೆಲಸಕ್ಕೆ ಅದನ್ನೇ ಧರಿಸಿಕೊಂಡು ಹೋಗುತ್ತಿದ್ದ, ಒಂದು ದಿನ ಉಗ್ರಾಣದಲ್ಲಿ ಧಾನ್ಯಗಳನ್ನು ಚೀಲದಲ್ಲಿ ತುಂಬಿಸುವಾಗ ಅವನ ದುಬಾರಿ ವಾಚ್ ಕಳೆದು ಹೋಯಿತು.
ರೈತನಿಗೆ ದಿಕ್ಕೇ ತೋಚಲಿಲ್ಲ ಮುಂಜಾನೆಯಿಂದ ಮದ್ಯಾಹ್ನದವರೆಗೆ ಹುಡುಕಿದ ನಂತರ ಹೊರಗೆ ಆಡುತ್ತಿದ್ದ ಮಕ್ಕಳನ್ನು ಕರೆದು ತನ್ನ ವಾಚ್ ಕಳೆದಿದೆ ಅದನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುತ್ತೇನೆ ಎಂದು ಆ ಮಕ್ಕಳನ್ನು ಹುಡುಕಲು ಹೇಳಿದ. ಆದರೂ ಏನು ಪ್ರಯೋಜನೆ ಆಗಲಿಲ್ಲ, ರೈತ ತುಂಬಾ ನಿರಾಸೆಯಾದ.
ಮುಂದೇನು ಮಾಡಬೇಕು ಎಂದು ಯೋಚಿಸತೊಡಗಿದ ಆಗ ಒಬ್ಬ ಹುಡುಗ ಬಂದು ಮತ್ತೊಂದು ಅವಕಾಶ ಕೊಡಿ ಎಂದ. ರೈತ ಆಯಿತು ಹುಡುಕಪ್ಪ ಎಂದ ಹುಡುಗ ಕೇವಲ ಹತ್ತೇ ನಿಮಿಷದಲ್ಲಿ ವಾಚ್ ಅನ್ನು ಹುಡುಕಿಕೊಂಡು ಬಂದ, ರೈತ ಖುಷಿ ಮತ್ತು ಅಚ್ಚರಿಯಿಂದ ಆ ಹುಡುಗನನ್ನು ಹೇಗಪ್ಪಾ ಅಷ್ಟು ಬೇಗ ಹುಡುಕಿದೆ ಎಂದು ಕೇಳಿದ.
ಆ ಹುಡುಗ ಉತ್ತರಿಸಿದ ಕೋಣೆಯೆಲ್ಲ ನಿಶ್ಯಬ್ಧವಾಗಿತ್ತು ನಾನು ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಕೈಗಡಿಯಾರದ ಟಿಕ್-ಟಿಕ್ ಶಬ್ದ ಕೇಳಿದೆ ಅದೇ ಶಬ್ದವನ್ನು ಹಿಂಬಾಲಿಸಿಕೊಂಡು ಹೋದೆ ಆಗ ಧಾನ್ಯಗಳ ನಡುವೆ ಇದ್ದ ನಿಮ್ಮ ವಾಚು ಸಿಕ್ಕಿತು ಎಂದ ರೈತ ಖುಷಿಯಾಗಿ ಹುಡುಗನಿಗೆ ಉಡುಗರೇ ನೀಡು ಕಳಿಸಿದ.
ಆ ಹುಡುಗ ಹೇಳಿದ ಮಾತು ಅಕ್ಷರ ಸಹ ಸತ್ಯವಲ್ಲವೇ ಆತುರದಿಂದ ಮಾಡುವ ಯಾವುದೇ ಕೆಲಸ ಯಶಸ್ವಿಯಾಗುವುದಿಲ್ಲ. ಶಾಂತಿಯುತವಾಗಿ ನಿಧಾನವಾಗಿ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಿದರೆ ಅದು ಉತ್ತಮವಾಗಿ ಕೆಲಸ ಮಾಡುತ್ತದೆ.
For more Stories follow Karunadu Today
Click here to Join Our Whatsapp Group