
ರಾತ್ರಿಯ ವೇಳೆ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಮಧ್ಯದಲ್ಲಿ ಬೆಳಕಿನ ತುಂಡೊಂದು ಬೀಳುವುದನ್ನು ಒಮ್ಮೆಯಾದರು ನೀವು ನೋಡಿರುತ್ತೀರಿ. ಇವುಗಳನ್ನು ನೋಡುತ್ತ ನಮಗೆ ಬೇಕಾಗಿರುವುದನ್ನು ಬೇಡಿಕೊಂಡರೆ ಅಂದುಕೊಂಡಿದ್ದು ನಿಜವಾಗುತ್ತದೆ ಎನ್ನುವ ಮೂಡನಂಬಿಕೆ ಕೂಡ ಇದೆ. ಆದರೆ ಇವುಗಳು ಕ್ಷುದ್ರಗ್ರಹಗಳ ತುಂಡುಗಳಾಗಿದ್ದು ಪ್ರತಿ ದಿನ ಭೂಮಿಯ ವಾತಾವರಣದ ಒಳಗೆ ಈ ರೀತಿ ಬಂದು ಬೀಳುತ್ತಿರುತ್ತವೆ ಎನ್ನುವುದು ಅದೆಷ್ಟೋ ಜನಗಳಿಗೆ ತಿಳಿದಿಲ್ಲ. ಅಂದಹಾಗೆ ಈ ತುಂಡುಗಳು ಭೂಮಿಗೆ ಏಕೆ ಈ ರೀತಿ ಬಂದು ಬೀಳುತ್ತವೆ? ಅಷ್ಟಕ್ಕು ಇವುಗಳು ನಮ್ಮ ಸೌರಮಂಡಲದಲ್ಲಿ ಇರುವುದಾದರು ಎಲ್ಲಿ? ಹಾಗು ಇವುಗಳು ಯಾವುದರಿಂದ ಮಾಡಲ್ಪಟ್ಟಿರುತ್ತವೆ ಎನ್ನುವ ಅನೇಕ ಪ್ರಶ್ನೆಗಳಿಗೆ ಇಂದು ಉತ್ತರ ತಿಳಿದುಕೊಳ್ಳೋಣ ಬನ್ನಿ.
ನೂರಾರು ವರ್ಷಗಳಿಂದ ವಿಜ್ಞಾನಿಗಳಿಗೆ ಈ ಕ್ಷುದ್ರಗ್ರಹದ ತುಂಡುಗಳು ಅಥವ ಧೂಮಕೇತುಗಳು ಭೂಮಿಗೆ ಎಲ್ಲಿಂದ ಬಂದು ಅಪ್ಪಳಿಸುತ್ತಿವೆ ಎಂದು ತಿಳಿದುಕೊಳ್ಳುವ ಕುತೂಹಲವಿತ್ತು. ಆದರೆ ತಂತ್ರಜ್ಞಾನದ ಕೊರತೆಯಿಂದ ಇದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಾಲ ಕಳೆದಂತೆ ನೂತನ ತಂತ್ರಜ್ಞಾನ ಬಳಸಿಕೊಳ್ಳುತ್ತ ಹೋದ ವಿಜ್ಞಾನಿಗಳು ಶಕ್ತಿಶಾಲಿ ಟೆಲಿಸ್ಕೋಪ್ ಗಳನ್ನು ಕಂಡುಹಿಡಿದರು. ಇದಷ್ಟೇ ಅಲ್ಲದೆ ಭೂಮಿಗೆ ಬಂದು ಅಪ್ಪಳಿಸಿದ ಅನೇಕ ಕ್ಷುದ್ರ ಗ್ರಹಗಳ ತುಂಡುಗಳ ಅಧ್ಯಯನ ನಡೆಸಲು ಶುರು ಮಾಡಿದರು. ಆಗ ಅವರಿಗೆ ತಿಳಿದದ್ದು ನಮ್ಮ ಸೌರಮಂಡಲದಲ್ಲಿ ಒಂದು ಸ್ಥಳವಿದ್ದು ಅಲ್ಲಿಂದಲೆ ಇವುಗಳು ಭೂಮಿಯ ಕಡೆಗೆ ಬರುತ್ತಿವೆ ಎನ್ನುವುದು. ಆದರೆ ಟೆಲಿಸ್ಕೋಪ್ ಮೂಲಕ ಸೌರಮಂಡಲದ ಬೇರೆ ಗ್ರಹಗಳ ಕಡೆಗೆ ನೋಡಿದಾಗ ಹೇಗೆ ನಮ್ಮ ಭೂಮಿಯ ಮೇಲೆ ಕ್ಷುದ್ರಗ್ರಹಗಳ ತುಂಡುಗಳು ಬಂದು ಅಪ್ಪಳಿಸುತ್ತಿವೆ ಅದೇ ರೀತಿ ಆ ಗ್ರಹಗಳ ಮೇಲೂ ಬೀಳುತ್ತಿವೆ ಎಂದು ತಿಳಿದುಬಂದಿತು.
ಇದರಿಂದ ಈ ಧೂಮಕೇತುಗಳು ಕೇವಲ ನಮ್ಮ ಭೂಮಿಯ ಮೇಲೆ ಮಾತ್ರವಲ್ಲದೆ ಬೇರೆ ಗ್ರಹಗಳ ಮೇಲೂ ಬೀಳುತ್ತಿವೆ ಎನ್ನುವುದು ಖಾತ್ರಿಯಾಯಿತು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸೆಪ್ಟೆಂಬರ್ 21,2012 ರಲ್ಲಿ ಸೂರ್ಯನ ಕಡೆಗೆ ಒಂದು ಧೂಮಕೇತುವು ತುಂಬಾ ವೇಗವಾಗಿ ಹೋಗುತ್ತಿರುವುದನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಮೂಲಕ ಪತ್ತೆ ಮಾಡಿದರು. ಇದಕ್ಕೆ ISON ಎಂದು ಹೆಸರಿಡುವ ಮೂಲಕ ಇದರ ಅಧ್ಯಯನ ಶುರು ಮಾಡಿದ ವಿಜ್ಞಾನಿಗಳು 2013 ರವರೆಗು ಇದರ ಮೇಲೆ ಕಣ್ಣಿಟ್ಟಿದ್ದರು. ಆದರೆ ಅದೊಂದು ದಿನ ಒಮ್ಮೆಲೆ ಅದು ಬಾಹ್ಯಾಕಾಶದಲ್ಲಿ ಕಾಣಿಸಲಿಲ್ಲ. ನಂತರ ತಿಳಿದುಬಂದ ಸಂಗತಿ ಏನೆಂದರೆ ಇದು ಸೂರ್ಯನ ಒಳಗೆ ಸೇರಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ ಎಂದು. ಇದೇ ರೀತಿ C/2013 A1 (Siding Spring) ಎನ್ನುವ ಮತ್ತೊಂದು ಧೂಮಕೇತು ನಮ್ಮ ಸಂಪೂರ್ಣ ಸೌರಮಂಡಲವನ್ನೇ ಬಿಟ್ಟು ಹೊರಹೋಗುವುದನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಮೂಲಕ ಗಮನಿಸಿದರು. ಇದರೊಂದಿಗೆ ನಮ್ಮ ಸೌರಮಂಡಲದಲ್ಲಿರುವ ಯಾವುದೋ ಒಂದು ಸ್ಥಳದಿಂದ ಈ ಧೂಮಕೇತುಗಳು ಆಗಾಗ್ಗೆ ಸೌರಮಂಡಲದ ಒಳಗೆ ಬರುತ್ತಿರುತ್ತವೆ ಎನ್ನುವುದು ತಿಳಿದುಬಂದಿತು.
ಆ ಸ್ಥಳವನ್ನು ಪತ್ತೆ ಮಾಡುತ್ತ ಹೋದ ವಿಜ್ಞಾನಿಗಳು ಸೂರ್ಯನಿಂದ ಬರೋಬ್ಬರಿ 2000 ದಿಂದ 1 ಲಕ್ಷ Astronimcal Units ಗಳಷ್ಟು ದೂರದಲ್ಲಿ ಧೂಮಕೇತುಗಳಿಂದ ತುಂಬಿಕೊಂಡಿರುವ ಮೋಡವೊಂದು ಇರುವುದನ್ನು ಪತ್ತೆ ಮಾಡಿದರು. ಅಂದಹಾಗೆ ಈ ಮೋಡವನ್ನು ಮೊದಲಿಗೆ ಪತ್ತೆ ಮಾಡಿದ್ದು ಡಚ್ ಖಗೋಳಶಾಸ್ತ್ರಜ್ಞ “Jan Oort”. 1950 ರಲ್ಲಿಯೇ ಧೂಮಕೇತುಗಳನ್ನು ತನ್ನೊಳಗೆ ತುಂಬಿಕೊಂಡಿರುವಂತಹ ಒಂದು ಮೋಡವು ನಮ್ಮ ಸೌರಮಂಡಲದ ತುತ್ತ ತುದಿಯಲ್ಲಿದೆ ಎಂದು ಹೇಳಿದ್ದರು. ಇದೇ ಕಾರಣದಿಂದ ಈ ಮೋಡಕ್ಕೆ oort cloud ಎಂದು ಹೆಸರಿಡಲಾಯಿತು. ಅಂದಹಾಗೆ ಈ oort cloud ಅನ್ನು ಎರಡು region ನಲ್ಲಿ ವಿಂಗಡಿಸಲಾಗಿದೆ. ಒಳಗಿನ region ಅನ್ನು hills cloud ಎಂದು ಹೇಳಿದರೆ ಹೊರಗಿನ region ಅನ್ನು oort cloud ಎಂದು ಕರೆಯಲಾಗಿದೆ. ಈ hills cloud ನಮ್ಮ ಸೂರ್ಯನಿಂದ 20 ರಿಂದ 30 ಸಾವಿರ Astronimcal Units ಗಳಷ್ಟು ದೂರದಲ್ಲಿದ್ದರೆ ಹೊರಗಿನ region ಆದ oort cloud ಸೂರ್ಯನಿಂದ ಬರೋಬ್ಬರಿ 1 ಲಕ್ಷ Astronimcal Units ಗಳಷ್ಟು ದೂರದಲ್ಲಿದೆ ಎಂದು ಹೇಳಲಾಗುತ್ತಿದೆ. ಅಕಸ್ಮಾತ್ ಈ oort cloud ಅನ್ನು ಅಧ್ಯಯನ ಮಾಡುವ ಸಲುವಾಗಿ voyager ನೌಕೆಯ ತರಹದ ಒಂದು ನೌಕೆಯೊಂದನ್ನು ಕಳುಹಿಸಿದರು ಕೂಡ ಇದನ್ನು ತಲುಪಲು ಬರೋಬ್ಬರಿ 300 ವರ್ಷಗಳೇ ಬೇಕಂತೆ. ಇದರೊಂದಿಗೆ ಈ oort cloud ಅದೆಷ್ಟು ದೂರದಲ್ಲಿದೆ ಎಂದು ನೀವೇ ತಿಳಿದುಕೊಳ್ಳಿ.
ಇನ್ನು ಈ oort cloud ನಿಂದ ಭೂಮಿಗೆ ಬಂದು ಅಪ್ಪಳಿಸಿದ ಕೆಲ ಧೂಮಕೇತುಗಳ ಅಧ್ಯಯನ ಮಾಡಿರುವ ವಿಜ್ಞಾನಿಗಳು ಇವುಗಳ ಒಳಗೆ ನೀರು, ಮೀತೇನ್, ಈತೇನ್, carbon monoxide, hydrogen cyanide, ಮತ್ತು ಅಮೋನಿಯದಂತಹ ಅಂಶಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಇದರೊಂದಿಗೆ oort cloud ಒಳಗಿರುವ ಧೂಮಕೇತುಗಳು icy volatilesಗಳಾಗಿದ್ದು ಕನಿಷ್ಠ 1 ಕಿಲೋಮೀಟರ್ ನಷ್ಟು ವೃತ್ತಾಕಾರ ಹಾಗು ಗರಿಷ್ಠ 20 ಕಿಲೋಮೀಟರ್ ನಷ್ಟು ವೃತ್ತಾಕಾರ ಹೊಂದಿವೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಧೂಮಕೇತುಗಳನ್ನೇ ಹೊಂದಿರುವ ಈ oort cloud ಹೇಗೆ ಸೃಷ್ಟಿಯಾಯಿತು ಎಂದು ವಿಜ್ಞಾನಿಗಳು ಇನ್ನು ಕೂಡ ಸಂಶೋಧನೆ ನಡೆಸುತ್ತಲೇ ಇದ್ದು ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಸೌರ ಮಂಡಲ ರಚನೆಯಾಗುವ ವೇಳೆ ಅಳಿದುಳಿದ ದೂಳಿನ ಕಣಗಳು ಸೇರಿಕೊಂಡು ಧೂಮಕೇತುಗಳಾಗಿದ್ದು ಇಂತಹ ಕೋಟ್ಯಾನು ಕೋಟಿ ಧೂಮಕೇತುಗಳು ಸೇರಿಕೊಂಡು ಈ oort cloud ರಚನೆಯಾಗಿದೆಯಂತೆ. ಆದರೆ ಇದಕ್ಕೆ ಸರಿಯಾದ ಪುರಾವೆಗಳಿಲ್ಲದ ಕಾರಣ ಇದರ ಕುರಿತು ಮತ್ತಷ್ಟು ಸಂಶೋದನೆಗಳು ನಡೆಯುತ್ತಲೆ ಇವೆ. ಮುಂಬರುವ ದಿನಗಳಲ್ಲಿ ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ನಾವು ಪಡೆಯಬಹುದಾಗಿದೆ.
Follow Karunadu Today for more Interesting Facts & Stories.
Click here to Join Our Whatsapp Group