
ನಾವು ಪ್ರತಿಯೊಬ್ಬರಿಗೂ ಬೆಲೆ ಕೊಡಬೇಕು ಬೇರೆಯವರನ್ನು ಗೌರವಿಸುವುದರಲ್ಲಿಯೇ ನಮ್ಮ ಗೌರವ ಅಡಗಿದೆ. ಬೇರೆಯವರನ್ನು ನಾವು ಗೌರವಿಸದೆ, ನಮ್ಮ ತಪ್ಪುಗಳನ್ನು ಲೆಕ್ಕಿಸದೆ ಕೇವಲ ಅವರ ತಪ್ಪುಗಳನ್ನು ಮಾತ್ರ ಪರಿಗಣಿಸಿದರೆ ಮುಂದೊಂದು ದಿನ ನಷ್ಟ ನಮಗೆ ಆಗುತ್ತದೆ ಹೊರತು ಅವರಿಗಲ್ಲ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಕಥೆ ಇದೆ ನೋಡಿ.
ಒಮ್ಮೆ ಒಬ್ಬ ಶ್ರೀಮಂತ ಮಹಿಳೆ ವಿಮಾನದಲ್ಲಿ ಪ್ರಯಾಣಿಸಲೆಂದು ವಿಮಾನ ನಿಲ್ದಾಣದ ತಂಗುದಾಣದಲ್ಲಿ ಚೇರ್ ಮೇಲೆ ಕುಳಿತ್ತಿದ್ದಳು. ಆಗ ಅವರ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತ್ತಿದ್ದ, ನೋಡಲು ತುಂಬಾ ಒರಟ ಎನ್ನಿಸುವಂತ್ತಿದ್ದ, ಅವನ ಹೇರ್ ಸ್ಟೈಲ್ ಮತ್ತು ಅವನು ಧರಿಸಿದ ಬಟ್ಟೆಗಳು ತುಂಬಾ ವಿಚಿತ್ರವಾಗಿದ್ದವು, ಇದನ್ನು ನೋಡಿದ ಆ ಮಹಿಳೆ ಸುಮ್ಮನೆ ಏನು ಮಾತನಾಡದೆ ಕುಳಿತಿದ್ದಳು.
ಕೆಲ ನಿಮಿಷಗಳ ನಂತರ ಆ ಮಹಿಳೆಯು ತಾನು ಬೇಕರಿಯಲ್ಲಿ ತಂದಿದ್ದ ಬಿಸ್ಕತ್-ಗಳನ್ನು ತೆರೆದು ತಿನ್ನಲು ಶುರುಮಾಡಿದಳು. ಆಗ ಪಕ್ಕದಲ್ಲಿ ಕುಳಿತ್ತಿದ್ದ ಆ ವಿಚಿತ್ರವಾದ ಅಪರಿಚಿತ ವ್ಯಕ್ತಿಯು ಇವರನ್ನು ಕೇಳದೆ ಕೈ ಹಾಕಿ ಬಿಸ್ಕತ್ ತೆಗೆದುಕೊಂಡು ತಿನ್ನಲು ಶುರು ಮಾಡಿದ. ಆಕೆಗೆ ಅಚ್ಚರಿಯಾಯಿತು, ಮಹಿಳೆ ಪ್ರತೀ ಬಾರಿ ಒಂದೊಂದು ಬಿಸ್ಕತ್ ತೆಗೆದುಕೊಂಡಾಗ ಇವನು ಸಹ ಒಂದು ಬಿಸ್ಕತ್ ತೆಗೆದುಕೊಂಡು ತಿನ್ನಲು ಶುರುಮಾಡುತ್ತಿದ್ದ. ಮಹಿಳೆಗೆ ತುಂಬಾ ಕೋಪ ಬಂದಿತು ಅವನನ್ನು ಕೆಣಕಿದರೆ ತನಗೆ ತೊಂದರೆಯಾಗುತ್ತದೆ ನೋಡಲು ಸಹ ವಿಚಿತ್ರವಾಗಿದ್ದಾನೆ ಎಂದುಕೊಂಡು ಸುಮ್ಮನೆ ಕುಳಿತಳು.
ಕೊನೆಗೆ ಆ ಬಿಸ್ಕತ್ ಪ್ಯಾಕೆಟ್-ನಲ್ಲಿ ಕೊನೆಯ ಬಿಸ್ಕಿಟ್ ಉಳಿದಿತ್ತು, ಆಗ ಮಹಿಳೆಯು ಅವನು ಏನು ಮಾಡುತ್ತಾನೆ ಎಂದು ಕುತೂಹಲದಿಂದ ಕಾಯುತ್ತಿದ್ದಳು. ಅವನೂ ಸಹ ಕೇವಲ ಒಂದೇ ಬಿಸ್ಕತ್ ಉಳಿದಿದೆ ಎಂದು ನೋಡಿ ಅದನ್ನು ತೆಗೆದುಕೊಂಡು ಅರ್ಧ ಮಾಡಿ ಒಂದರ್ಧವನ್ನು ತಾನು ತೆಗೆದುಕೊಂಡು ಇನ್ನುಳಿದ ಅರ್ಧ ಬಿಸ್ಕತ್ ಅನ್ನು ಆ ಮಹಿಳೆಗೆ ನೀಡಿದನು, ಆಗ ಆ ಮಹಿಳೆಯು ಈ ಮನುಷ್ಯನಿಗೆ ಅಷ್ಟಾದರೂ ಬುದ್ದಿ ಇದೆಯೆಲ್ಲ ಎಂದುಕೊಂಡಳು.

ಹೀಗೆ ಮತ್ತೆರೆಡು ಪ್ಯಾಕೆಟಗಳನ್ನು ತೆರೆದಳು ಅವನು ಅದನ್ನು ಸಹ ಬಿಡಲಿಲ್ಲ, ಕೊನೆಗೆ ವಿಮಾನದ ಬೋರ್ಡಿಂಗ್ ಶುರುವಾಯಿತು ಆಗ ಅವಳು ನಿಟ್ಟುಸಿರು ಬಿಟ್ಟಳು. ನಂತರ ಎಲ್ಲಾ ದಾಖಲಾತಿ ಪ್ರಕ್ರಿಯೆ ಮುಗಿದ ಮೇಲೆ ವಿಮಾನದಲ್ಲಿ ತನಗೆ ನೀಡಿದ ಸೀಟಿನಲ್ಲಿ ಹೋಗಿ ಆ ಮಹಿಳೆ ಕುಳಿತು ಒಂದು ಕ್ಷಣ ನಡೆದ ಘಟನೆಯನ್ನು ನೆನೆಸಿಕೊಂಡಳು. ಅಷ್ಟಕ್ಕೂ ಆ ವ್ಯಕ್ತಿ ಏಕೆ ಆ ರೀತಿ ವರ್ತಿಸಿದ ಎಂದು ಆಕೆಗೆ ಕಾಡುತ್ತಿತ್ತು, ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಹತ್ತಿದರು.
ಕೆಲ ಕ್ಷಣಗಳ ನಂತರ ವಿಮಾನ ಟೇಕ್ ಆಫ್ ಆಯಿತು, ಆ ಮಹಿಳೆ ನಿದ್ರೆಗೆ ಜಾರಿದಳು ಅದು ಸಾಯಂಕಾಲದ ಟೀ ಸಮಯವಾದ್ದರಿಂದ ವಿಮಾನದ ಸಿಬ್ಬಂಧಿ ಎಲ್ಲರಿಗೂ ಚಹಾ ಮತ್ತು ಕಾಫಿ ನೀಡುತ್ತಿದ್ದರು. ಆಗ ಆ ಮಹಿಳೆ ಒಂದು ಟೀ ಕೇಳಿದಳು, ಟೀ ಜೊತೆ ಬಿಸ್ಕತ್ ತಿನ್ನಬೇಕು ಎಂದು ತನ್ನ ಬಳಿ ಉಳಿದ್ದಿದ್ದ ಬಿಸ್ಕತ್ ಪ್ಯಾಕ್ ಅನ್ನು ತೆರಯಲು ಮುಂದಾದಳು. ಆಗ ಅವಳಿಗೆ ಅಚ್ಚರಿ ಕಾದಿತ್ತು, ಆ ಬ್ಯಾಗ್ ತುಂಬಾ ತಾನು ಬೇಕರಿಯಲ್ಲಿ ಖರೀದಿಸಿದ್ದ ಎಲ್ಲಾ ಬಿಸ್ಕತ್ ಪ್ಯಾಕೆಟ್-ಗಳು ಹಾಗೇ ಇದ್ದವು. ತಕ್ಷಣ ಅವಳು ಆ ವ್ಯಕ್ತಿಯ ಬಗ್ಗೆ ಯೋಚಿಸಿದಳು, ಆಗ ಅವಳಿಗೆ ತಿಳಿದಿದ್ದು ಏನೆಂದರೆ ವಿಮಾನ ನಿಲ್ದಾಣದಲ್ಲಿ ತಾನು ತನ್ನ ಬಿಸ್ಕತ್ ಬ್ಯಾಗ್ ಬದಲು ಆ ಅಪರಿಚಿತ ವ್ಯಕ್ತಿಯ ಬ್ಯಾಗಿನಿಂದ ಬಿಸ್ಕತ್ ಅನ್ನು ತಿಂದ್ದಿದ್ದಳು ಎಂದು. ಅಸಲಿಗೆ ಆ ವಿಚಿತ್ರವಾಗಿದ್ದ ವ್ಯಕ್ತಿ ತಿಂದ್ದಿದ್ದು ಅವನೇ ಖರೀದಿಸಿದ್ದ ಬಿಸ್ಕತ್-ಗಳನ್ನ ಹೊರತು ಆ ಮಹಿಳೆಯದ್ದಲ್ಲ. ಅವಳಿಗೆ ಆಗ ಆ ವ್ಯಕ್ತಿಯ ಬಗ್ಗೆ ತುಂಬಾ ಹೆಮ್ಮೆ ಅನ್ನಿಸಿತು. ಅವನಲ್ಲಿ ಕ್ಷಮೆಯಾಚಿಸಬೇಕು ಅನ್ನಿಸಿತು. ಆದರೆ ಸಮಯ ಮಿಂಚಿ ಹೋಗಿತ್ತು.
ಬೇರೆಯವರ ಬಗ್ಗೆ ಸರಿಯಾಗಿ ಅರಿಯದೇ ನಮ್ಮ ತಪ್ಪಿದ್ದರೂ ಅವರನ್ನು ದೋಷಿಸುವುದು ತುಂಬಾ ತಪ್ಪು. ಮೊದಲು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ, ಆಗಲೇ ನಾವು ಬೇರೆಯವರಿಗೆ ಬುದ್ದಿ ಹೇಳಲು ಸಾಧ್ಯ.
For more Stories follow Karunadu Today
Click here to Join Our Whatsapp Group