ನನಗೆ ಒಬ್ಬ ಹುಡುಗಿಯು ತುಂಬಾ ಇಷ್ಟವಾಗಿದ್ದಾಳೆ ಮದುವೆ ಆದರೆ ಅವಳನ್ನೇ ಆಗುವುದು ಅಂತ ತೀರ್ಮಾನಿಸಿದ್ದೇನೆ ಎಂದು ಆನಂದನು ಶಂಕರನಿಗೆ ಹೇಳಿದನು. ಅದಕ್ಕೆ ಶಂಕರ್, ಅಯ್ಯೋ ಮೊದಲು ನನ್ನ ಪ್ರೇಮ ಕಥೆಗೆ ಸಹಾಯ ಮಾಡೋ ಆಮೇಲೆ ನಿನ್ನ ಹುಡುಗಿಯ ಕಥೆಯನ್ನು ಕೇಳುತ್ತೇನೆ ಎಂದು ಬೇಸರದಿಂದ ಹೇಳಿದನು. ಶಂಕರನು ಬೇಸರವಾಗಿರುವುದನ್ನು ಕಂಡು ಆನಂದನು ನೀನೂ ಕೂಡ ಒಬ್ಬ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದೀಯ? ಯಾರದೋ ಹುಡುಗಿ ನನಗೆ ಹೇಳು ಅವಳು ಎಲ್ಲೇ ಇದ್ದರೂ ಹುಡುಕಿ ತಂದು ನಿನ್ನನ್ನು ಅವಳ ಜೊತೆ ಮದುವೆ ಮಾಡಿಸುವೆ ಎಂದು ಹೇಳಿದನು. ಅದಕ್ಕೆ ಶಂಕರನು ಅಲ್ಲಿ ನೋಡು ಎದುರು ಮನೆಯ ಮಾಳಿಗೆಯ ಮೇಲೆ ನಿಂತಿದ್ದಾಳೆ ಆಲ್ವಾ ಅವಳೇ ನನ್ನ ಹುಡುಗಿ, ಅವಳ ಮೇಲೆ ನನಗೆ ಮನಸ್ಸು ಆಗಿದೆ ಎಂದು ಹೇಳಿದ. ಅದನ್ನು ಹೇಳಿದ ತಕ್ಷಣ ಆನಂದನು ಶಂಕರನನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನು ಏನೂ ಚಿಂತಿಸಬೇಡ ನಾನು ನಿನಗೆ ಸಹಾಯ ಮಾಡುವೆ ಎಂದು ಹೇಳಿದ. ಈ ಮಾತನ್ನು ಕೇಳಿ ಶಂಕರನಿಗೆ ತುಂಬಾ ಸಂತೋಷವಾಗಿ ನಿನ್ನಂಥ ಸ್ನೇಹಿತನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದು ಕಣ್ಣೀರಿಟ್ಟನು.

ಅಂದ ಹಾಗೆ ಈ ಆನಂದನು ಶಂಕರನನ್ನು ಯಾಕೆ ಇಷ್ಟೊಂದು ಇಷ್ಟ ಪಡುತ್ತಿದ್ದಾನೆಂದರೆ ಆನಂದನು ಒಬ್ಬ ಅನಾಥ, ಅವನು ಹುಟ್ಟಿ ಬೆಳೆದಿದ್ದು ಎಲ್ಲಾ ಅನಾಥಾಶ್ರಮದಲ್ಲೇ. ಅವನಿಗೆ ಯಾರೂ ಇರಲಿಲ್ಲ.ಆದರೆ ಶಾಲೆಯಲ್ಲಿ ಮಾತ್ರ ಶಂಕರನು ಆನಂದನಿಗೆ ಒಳ್ಳೆಯ ಸ್ನೇಹಿತನಾಗಿದ್ದ.ಅದೊಂದು ದಿನ ಶಾಲೆಯಲ್ಲಿ ಆಟವಾಡುತ್ತಿದ್ದಾಗ ಶಂಕರನು ತಲೆ ತಿರುಗಿ ಬಿದ್ದಿದ್ದನ್ನು ಗಮನಿಸಿದ ಆನಂದನು ಅವನನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಅವನನ್ನು ಕಾಪಾಡಿದ್ದನು. ವಿಷಯ ತಿಳಿದು ಆಸ್ಪತ್ರೆಗೆ ಬಂದ ಶಂಕರನ ಪೋಷಕರು ಆನಂದನಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಆನಂದನು ಒಬ್ಬ ಅನಾಥನೆಂದು ತಿಳಿದು ಅವನನ್ನು ದತ್ತು ತೆಗೆದುಕೊಂಡರು. ಅಂದಿನಿಂದ ಆನಂದ್ ಮತ್ತು ಶಂಕರ್ ಇಬ್ಬರೂ ಸ್ನೇಹಿತರಲ್ಲದೆ ಸಹೋದರರಾದರು. ಶಂಕರನ ತಂದೆ ತಾಯಿಯು ಆನಂದನಿಗೆ ಪ್ರೀತಿ ನೀಡಿ ಸ್ವಂತ ಮಗನ ತರಹ ನೋಡಿಕೊಳ್ಳುತ್ತಿದ್ದರು. ಜೊತೆಯಲ್ಲಿ ಹುಟ್ಟಿರಲಿಲ್ಲದಿದ್ದರೂ ತುಂಬಾ ಅನ್ಯೋನ್ಯವಾಗಿ ಬೆಳೆದು ದೊಡ್ಡವರಾದರು. ಇದೇ ಕಾರಣಕ್ಕೆ ಆನಂದನಿಗೆ ಶಂಕರ್ ಎಂದರೆ ಪಂಚಪ್ರಾಣ. ಶಂಕರನಿಗೋಸ್ಕರ ಏನನ್ನಾದರೂ ಮಾಡುತ್ತಿದ್ದ.

ಶಂಕರನ ಪ್ರೇಮ ಕಥೆಗೆ ಸಹಾಯ ಮಾಡಲೆಂದು ಆನಂದನು ಒಂದು ದಿನ ಎದುರು ಮನೆಯ ಹುಡುಗಿಯನ್ನು ಭೇಟಿಯಾಗಿ ಶಂಕರನ ಪ್ರೀತಿಯ ಬಗ್ಗೆ ತಿಳಿಸುತ್ತಾನೆ. ಅದಕ್ಕೆ ಆ ಹುಡುಗಿ ಸರಿ ಅವನನ್ನು ನಾಳೆ ಪಾರ್ಕ್ ಗೆ ಕರೆದುಕೊಂಡು ಬಾ, ಅವನನ್ನು ಭೇಟಿಯಾಗುತ್ತೇನೆ ನಂತರ ಅವನ ಪ್ರೀತಿಯನ್ನು ಒಪ್ಪುವುದೋ ಬೇಡವೋ ಎಂದು ತಿಳಿಸುತ್ತೇನೆ ಎಂದು ಹೇಳುತ್ತಾಳೆ. ಈ ಖುಷಿ ಸಮಾಚಾರವನ್ನು ಆನಂದನು ಶಂಕರನಿಗೆ ಹೇಳುತ್ತಾನೆ. ಇದನ್ನು ಕೇಳಿದ ಶಂಕರನು ತುಂಬಾ ಖುಷಿ ಪಟ್ಟು ಆನಂದನನ್ನು ತಬ್ಬಿಕೊಂಡು ನನಗೆ ಸಹಾಯ ಮಾಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳುತ್ತಾನೆ. ಆಗ ಆನಂದನು ಈ ಕೃತಜ್ಞತೆ ಎಲ್ಲಾ ಆಮೇಲೆ ಹೇಳುವಂತೆ ಮೊದಲು ಅವಳಿಗೆ ಹೇಗೆ ನಿನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದು ಯೋಚಿಸು ಎಂದು ಹೇಳುತ್ತಾನೆ. ಅದಕ್ಕೆ ಶಂಕರನು ನನಗೆ ಗೊತ್ತಾಗುತ್ತಿಲ್ಲ ಕಣೋ ನೀನೇ ಹೇಳಿಕೊಡು ಎಂದು ಆನಂದನ ಸಹಾಯ ಕೇಳುತ್ತಾನೆ. ಆನಂದನು ಶಂಕರನಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯನ್ನು ಹೇಳಿಕೊಡುತ್ತಾನೆ.

ಮಾರನೆಯ ದಿನ ಆನಂದ್ ಮತ್ತು ಶಂಕರ್ ಆ ಹುಡುಗಿ ಬರುವುದಕ್ಕೂ ಮುಂಚೆಯೇ ಪಾರ್ಕಿಗೆ ಹೋಗುತ್ತಾರೆ. ನಂತರ ಹುಡುಗಿ ಬಂದ ತಕ್ಷಣ ಆನಂದನು ಇವನೇ ನನ್ನ ಸ್ನೇಹಿತ ಶಂಕರ್ ನಿಮ್ಮನ್ನು ಇಷ್ಟ ಪಡುತ್ತಿರುವವನು, ನೀವಿಬ್ಬರು ಮಾತನಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಆಗ ಶಂಕರನು ಹಿಂದಿನ ದಿವಸ ಆನಂದನು ಹೇಳಿ ಕೊಟ್ಟ ಹಾಗೆಯೇ ಆ ಹುಡುಗಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಆ ಹುಡುಗಿಗೆ ಶಂಕರನ ಮಾತುಗಳನ್ನು ಕೇಳಿ ಅವನ ಮೇಲೆ ಮನಸ್ಸು ಆಗುತ್ತದೆ. ನಂತರ ಶಂಕರನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ತದನಂತರ ಇಬ್ಬರೂ ಮಾತನಾಡುತ್ತಾ ಸಲುಗೆಯಿಂದ ಅಕ್ಕ ಪಕ್ಕ ಕೂಡುತ್ತಾರೆ. ಕೆಲ ಸಮಯದ ನಂತರ ಆ ಹುಡಗಿಯನ್ನು ಮನೆಯ ತನಕ ಬಿಟ್ಟು ಬರಲು ಶಂಕರನು ಹೋಗುತ್ತಾನೆ. ಹೋಗುವ ಮುಂಚೆ ದೂರದಲ್ಲಿ ನಿಂತಿದ್ದ ಆನಂದನ ಬಳಿ ಬಂದು ಆ ಹುಡುಗಿಯು ತನ್ನ ಪ್ರೀತಿಯನ್ನು ಒಪ್ಪಿಕೊಂಡ ವಿಷಯವನ್ನು ತಿಳಿಸುತ್ತಾನೆ. ಇದನ್ನು ಕೇಳಿ ಆನಂದನು ತುಂಬಾ ಖುಷಿಪಡುತ್ತಾನೆ. ಆ ಹುಡುಗಿಯನ್ನು ಮನೆಯವರೆಗು ಗಾಡಿಯ ಮೇಲೆ ಬಿಟ್ಟು ಬರುತ್ತೇನೆ ಎಂದು ಹೇಳಿ ಶಂಕರನು ಅಲ್ಲಿಂದ ಹೊರಡುತ್ತಾನೆ.

 

ಆ ಹುಡುಗಿ ಮತ್ತು ಶಂಕರನು ಅಲ್ಲಿಂದ ಹೊರಟ ಮೇಲೆ ಆನಂದನು ಪಾರ್ಕಿನ ಒಂದು ಬೆಂಚಿನ ಮೇಲೆ ಕುಳಿತು ಆಳುವುದಕ್ಕೆ ಶುರು ಮಾಡುತ್ತಾನೆ. ಏಕೆಂದರೆ ಶಂಕರನು ಇಷ್ಟ ಪಟ್ಟಿರುವ ಹುಡುಗಿಯನ್ನು ಆನಂದನು ಮೂರು ವರ್ಷಗಳಿಂದ ಇಷ್ಟ ಪಡುತ್ತಿರುತ್ತಾನೆ. ಅವಳ ಬಗ್ಗೆ ಎಲ್ಲವನ್ನು ತಿಳಿದುಕೊಂಡು ಮದುವೆ ಆದರೆ ಇವಳನ್ನೇ ಆಗಬೇಕು ಎಂದು ತೀರ್ಮಾನಿಸಿ ಶಂಕರನ ಹತ್ತಿರ ಇದರ ಬಗ್ಗೆ ಮಾತನಾಡಲು ಬಂದಿರುವ  ಕ್ಷಣವೇ ಶಂಕರನಿಗೂ ಆ ಹುಡುಗಿಯೇ ಇಷ್ಟ ಎಂದು ತಿಳಿದು ಬಿಡುತ್ತದೆ. ಅನಾಥನಾದ ನನಗೆ ಶಂಕರನ ತಂದೆ ತಾಯಿಯು ಪ್ರೀತಿ ನೀಡಿದರು, ಅಣ್ಣ ತಮ್ಮ ಯಾರೂ ಇಲ್ಲದ ನನಗೆ ಸ್ನೇಹಿತನಾಗಿದ್ದ ಶಂಕರನು ಸಹೋದರರ ಪ್ರೀತಿ ಎಂದರೆ ಏನು ಎಂದು ತಿಳಿಸಿಕೊಟ್ಟ, ನನ್ನ ಬದುಕಿಗೆ ಒಂದು ಅರ್ಥ ಕೊಟ್ಟ ದೇವರು ಇವರು. ಇವರಿಗೋಸ್ಕರ ಇಷ್ಟ ಪಟ್ಟ ಹುಡುಗಿಯನ್ನು ಬಿಟ್ಟುಕೊಟ್ಟರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ತನ್ನಷ್ಟಕ್ಕೆ ತಾನು ಅಂದು ಕೊಳ್ಳುತ್ತಾ ಕಣ್ಣೀರು ಇಡತೊಡಗಿದ. ನಿಜವಾದ ಸ್ನೇಹವೆಂದರೆ ಇದೇ ಅಲ್ಲವೇ?

For more Stories follow Karunadu Today

Click here to Join Our Whatsapp Group