
ನಮ್ಮ ಬಳಿ ಹಣವಿಲ್ಲದಿದ್ದರೂ ಕೂಡ ಇರುವಂತಹ ಅಲ್ಪ-ಸ್ವಲ್ಪ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮದೇ ಆದ ಸ್ವಂತ ಉದ್ಯಮ ಸೃಷ್ಟಿ ಮಾಡಿಕೊಂಡು ನಡೆಸುವುದರಲ್ಲಿ ಇರುವ ತೃಪ್ತಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದರಲ್ಲಿ ಇರುವುದಿಲ್ಲ. ಅವರು ಎಷ್ಟೇ ಸಂಬಳ ನೀಡಿದರೂ ಕೂಡ ಕೊನೆಗೂ ನೌಕರರಾಗಿಯೇ ಉಳಿಯುತ್ತೇವೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ ನಮ್ಮಲ್ಲಿ ಸಾಕಷ್ಟು ಜನರು ಪ್ರತಿಭಾವಂತರಿದ್ದರೂ ಕೂಡ ಅವರಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಪರದಾಡುತ್ತಿದ್ದಾರೆ, ಇಂತಹವರು ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ಕಂಡುಕೊಳ್ಳಲು ಈ ಕಥೆ ಸ್ಪೂರ್ತಿದಾಯಕವಾಗಲಿದೆ.
ಒಂದೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯ ಮುಂದೆ ಒಬ್ಬ ಒಂದು ಚಿಕ್ಕ ವಡೆ ಹಾಗು ಕಚೋರಿಯನ್ನು ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದನು. ಅವನು ಮಾಡುವಂತಹ ರುಚಿಕರವಾದ ವಡೆ ಹಾಗು ಕಚೋರಿಗೆ ಮನಸೋತು ಕಂಪನಿಯ ಉದ್ಯೋಗಿಗಳು ಪ್ರತಿದಿನ ಊಟದ ಸಮಯದಲ್ಲಿ ಅಥವಾ ಸಂಜೆ ಕಚೋರಿಯ ರುಚಿ ಸವಿಯಲು ಬರುತ್ತಿದ್ದರು.

ಹೀಗೆ ಒಂದು ದಿನ ಕಂಪನಿಯ ಮ್ಯಾನೇಜರ್ ಗೆ ಈ ವಿಷಯ ತಿಳಿದು ಅವನು ಸಹ ಕಚೋರಿ ತಿನ್ನಲು ಬಂದನು, ಅವನಿಗೂ ಅದರ ರುಚಿ ತುಂಬಾ ಇಷ್ಟವಾಯಿತು, ಅಂಗಡಿಯವನನ್ನು ಹೊಗಳಿ ಕೊನೆಗೆ ಒಂದು ಪ್ರಶ್ನೆ ಕೇಳಿದನು. “ಅಲ್ಲಯ್ಯ ಇಷ್ಟು ಚೆನ್ನಾಗಿ ವ್ಯಾಪಾರ ನಿರ್ವಹಣೆ ಮಾಡುತ್ತೀಯಲ್ಲ ನೀನೇಕೆ ಇಲ್ಲಿ ಸಮಯ ಮತ್ತು ನಿನ್ನ ಸಾಮಥ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೀಯ” ಎಂದ. ನೀನು ಯಾವುದಾದರು ದೊಡ್ಡ ಫುಡ್ ಕಂಪನಿಯಲ್ಲಿ ಕೆಲಸ ಮಾಡಿದರೆ ನನ್ನ ಹಾಗೆ ಮ್ಯಾನೇಜರ್ ಆಗುತ್ತೀಯ ಎಂದ. ಇವನ ಮಾತು ಕೇಳಿದ ಕಚೋರಿ ಅಂಗಡಿಯವನು ಮುಗುಳು-ನಕ್ಕು ಮ್ಯಾನೇಜರ್ ಸಾಹೇಬರೇ ನನ್ನ ಕೆಲಸ ನಿಮ್ಮ ಕೆಲಸಕ್ಕಿಂತಲೂ ತುಂಬಾ ಉತ್ತಮ ಎಂದನು, ಅದಕ್ಕೆ ಮ್ಯಾನೇಜರ್ ಅದು ಹೇಗೆ ಎಂದನು. ನೀವು 5 ವರ್ಷಗಳ ಹಿಂದೆ ಈ ಕಂಪನಿಗೆ ಸೇರಿದಾಗ ನಾನು ಒಂದು ಚೀಲದಲ್ಲಿ ಕಚೋರಿ ಮಾರುತ್ತಿದ್ದೆ. ಆಗ ನಾನು ನಿತ್ಯ 500 ರೂಪಾಯಿ ಗಳಿಸುತ್ತಿದ್ದೆ ಆಗ ನಿಮ್ಮ ಸಂಬಳ 30,000 ರೂಪಾಯಿ. ನನ್ನ ವ್ಯಾಪಾರ ದಿನದಿಂದ ದಿನಕ್ಕೆ ವೃದ್ಧಿಯಾಗಿ ಚೀಲದಿಂದ ಒಂದು ಬಂಡಿ ಮತ್ತು ಈಗ ಒಂದು ಅಂಗಡಿಯಲ್ಲಿರುವೆ. ನಿಮಗೆ ಐದು ವರ್ಷದಲ್ಲಿ ಬಡ್ತಿಯಾಗಿ ನಿಮ್ಮ ಸಂಬಳ ಈಗ 60,000 ರೂಪಾಯಿ ಆಗಿದೆ ಎಂದು ಕೇಳಲ್ಪಟ್ಟೆ. ಆದರೆ ನಾನೀಗ ನಿತ್ಯ ರೂ. 5000 ಗಳಿಸುತ್ತಿದ್ದೇನೆ ಅಂದರೆ ತಿಂಗಳಿಗೆ ಸುಮಾರು 1 ಲಕ್ಷದ 50 ಸಾವಿರ, ಈ ವ್ಯಾಪಾರದಲ್ಲಿ ನನ್ನವರ ಭವಿಷ್ಯವಿದೆ ಏಕೆಂದರೆ ಮುಂದೊಂದು ದಿನ ನನ್ನ ಮಗ ಅಥವಾ ಮಗಳು ಈ ವ್ಯಾಪಾರವನ್ನು ಮುನ್ನಡೆಸುತ್ತಾರೆ ಆಗ ಅವರೇ ಇದಕ್ಕೆ ಮಾಲೀಕರು. ನೀವು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರು ನಿಮ್ಮ ಮಗ ಅಥವಾ ಮಗಳು ಮತ್ತೆ ಕೆಳಗಿನಿಂದಲೇ ಬರಬೇಕು ಕೊನೆಗೆ ಮ್ಯಾನೇಜರ್ ಮಾತ್ರ ಆಗಬಲ್ಲರು ಆ ಕಂಪನಿಯ ಮಾಲೀಕರಂತೂ ಆಗುವುದಿಲ್ಲ, ನೀವು ಪಟ್ಟ ಕಷ್ಟ ಅವರೂ ಪಡಬೇಕು ಎಂದ.

ಕಚೋರಿ ಮಾರುವವನ ಆ ಮಾತುಗಳನ್ನು ಕೇಳಿದ ಮ್ಯಾನೇಜರ್ ಗೆ ತುಂಬಾ ಅವಮಾನವಾದರೂ ಅವನಾಡಿದ ಮಾತು ನೂರಕ್ಕೆ ನೂರು ಸತ್ಯವೆನಿಸಿತು, ಕಚೋರಿಯ ಹಣವನ್ನು ನೀಡಿ ಭೇಷ್ ಎಂದು ಮುಂದೆ ಸಾಗಿದನು.
ನಿಜಕ್ಕೂ ಸ್ವಂತ ಉದ್ಯಮದಲ್ಲಿರುವ ಪ್ರಗತಿ ಮತ್ತು ಉಲ್ಲಾಸ ಬೇರೆಯವರ ಕೆಳಗೆ ದುಡಿಯುವುದರಲ್ಲಿ ಇಲ್ಲ ಅಲ್ಲವೇ?
For more Stories follow Karunadu Today
Click here to Join Our Whatsapp Group