
ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಕ್ಯಾಂಪ್ ನ ಒಳಗಡೆ ಹೋಗಿ ಮಲಗಿದೆ. ಮಲಗಿ ಹತ್ತು ನಿಮಿಷ ಕೂಡ ಆಗಿರಲಿಲ್ಲ. ತುಂಬಾ ಜೋರಾದ ಶಬ್ದ ಕೇಳಿ ಬಂತು. ಮಲಗಿದ್ದ ನನಗೆ ಎಲ್ಲಿ ನನ್ನ ಹೃದಯವೇ ಒಡೆದು ಹೋಯಿತೋ ಎಂದು ಗಾಬರಿಯಿಂದ ಎದ್ದೆ. ಸದ್ಯ ನನಗೆ ಏನು ಆಗಿರಲಿಲ್ಲ. ಏನಿದು ಶಬ್ದ ಎಂದು ತಿಳಿಯಲು ಹೊರಗಡೆ ಹೋಗಿ ನೋಡಿದರೆ ನನ್ನ ಸ್ನೇಹಿತನು ಕಾಲು ಕಳೆದುಕೊಂಡು ಅಮ್ಮಾ ಎಂದು ಕಿರುಚಾಡುತ್ತಾ ಒದ್ದಾಡುತ್ತಿದ್ದ. ಇನ್ನೊಬ್ಬ ಸ್ನೇಹಿತನು ಸತ್ತೇ ಹೋಗಿದ್ದ. ಒಂದು ಕ್ಷಣ ನನ್ನ ತಲೆ ಓಡಲೇ ಇಲ್ಲ. ನಂತರ ತಿಳಿಯಿತು ನಮ್ಮ ಶತ್ರುಗಳು ನಮ್ಮ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದು.

ತಕ್ಷಣವೇ ವಾಕೀ-ಟಾಕಿ ತೆಗೆದುಕೊಂಡು ನಮ್ಮ ಮೇಜರ್ ಗೆ ವಿಷಯ ತಿಳಿಸಿದೆ. ಹೀಗೆ ನಮ್ಮ ದೇಶ ಮತ್ತು ನಮ್ಮ ಶತ್ರುಗಳ ದೇಶದ ನಡುವೆ ಯುದ್ದ ಶುರುವಾಯಿತು. ಹದಿನೈದು ದಿನಗಳ ಕಾಲ ನಡೆದ ಈ ಘೋರ ಯುದ್ದವು ನಾನು ಸೇನೆಗೆ ಸೇರಿದ ಮೇಲೆ ಕಂಡ ಮೊದಲ ಯುದ್ದವಾಗಿತ್ತು. ಯುದ್ದವೆಂದರೆ ಇಷ್ಟೊಂದು ಘೋರವಾಗಿರುತ್ತದೆ ಎಂದು ನಾನು ಕನಸಲ್ಲೂ ಯೋಚಿಸಿರಲಿಲ್ಲ. ಈ ಯುದ್ದದಲ್ಲಿ ನನ್ನ ಹಲವಾರು ಸ್ನೇಹಿತರನ್ನು ಕಳೆದು ಕೊಂಡೆ. ನಮ್ಮ ಆಪ್ತರನ್ನು ಕಳೆದು ಕೊಂಡರೆ ಎಷ್ಟು ದುಖವಾಗುತ್ತದೆ ಎಂದು ಈ ಯುದ್ದದ ಮುಖಾಂತರ ನನಗೆ ತಿಳಿಯಿತು. ನಾನು ಮಾಡಿದ ಪುಣ್ಯವೋ ಅಥವಾ ನಮ್ಮ ತಂದೆ ತಾಯಿಯ ಆಶಿರ್ವಾದವೋ ನಾನು ಈ ಯುದ್ದದಲ್ಲಿ ಸಾಯದೆ ಇನ್ನೂ ಜೀವಂತವಾಗಿದ್ದೇನೆ.

ಕೊನೆಗೆ ಹದಿನೈದು ದಿನಗಳ ಸತತ ಪರಿಶ್ರಮದಿಂದ ನಮ್ಮ ದೇಶವನ್ನು ಶತ್ರುಗಳ ಮುತ್ತಿಗೆ ಯಿಂದ ಕಾಪಾಡಲು ಯಶಸ್ವಿಯಾದೆವು. ಶತ್ರು ದೇಶವು ನಮ್ಮ ಎದುರು ಮಂಡಿ ಊರಿ ಸೋಲೊಪ್ಪಿಕೊಂಡಿತು. ಜಯ ಗಳಿಸಿದ ಸಂತೋಷ ಒಂದೆಡೆಯಾದರೆ ಆಪ್ತ ಸ್ನೇಹಿತರನ್ನು ಕಳೆದುಕೊಂಡ ದುಃಖ ಇನ್ನೊಂದೆಡೆ. ಎಲ್ಲಾ ಮುಗಿದ ನಂತರ ನನ್ನ ಕೋಣೆಯಲ್ಲಿ ಕುಳಿತು “ನಿಜವಾಗಿಯೂ ಈ ಯುದ್ದ ನಮಗೆ ಬೇಕಿತ್ತೇ, ಮನುಷ್ಯನು ಎಷ್ಟು ಕ್ರೂರಿ ಇದ್ದಾನೆ” ಎಂದು ಯೋಚಿಸುತ್ತ ಕಣ್ಣೀರು ಹಾಕತೊಡಗಿದೆ. ಮಾರನೆಯ ದಿವಸ ನಮ್ಮ ಮೇಜರ್ ನನ್ನನ್ನು ಕರೆದು ನೀನು ತುಂಬಾ ದಣಿದಿರುವೆ ನಿನಗೆ ಒಂದು ವಾರ ರಜೆ ನೀಡುವೆ ಮನೆಗೆ ಹೋಗಿ ಬಾ ಎಂದು ಹೇಳಿದರು. ಅದನ್ನು ಕೇಳಿ ತುಂಬಾ ಖುಷಿಯಾಯಿತು. ಹದಿನೈದು ದಿನಗಳಿಂದ ಬಾಂಬ್ ಮತ್ತು ಗುಂಡು ಶಬ್ದಗಳನ್ನು ಕೇಳಿ ಮನಸ್ಸಿನ ನೆಮ್ಮದಿಯೇ ಹಾಳಾಗಿತ್ತು. ಊರಿನಲ್ಲಿ ಇರುವ ನನ್ನ ಕುಟುಂಬದವರನ್ನು ನೋಡಿದರೆ ಸ್ವಲ್ಪ ಮಾನಸಿಕ ನೆಮ್ಮದಿ ಮರುಕಳಿಸಬಹುದು ಎಂದುಕೊಂಡೆ. ಖುಷಿಯಿಂದ ಊರಿನ ಕಡೆಗೆ ಹೊರಟೆ.

ಹೋಗುವ ದಾರಿಯಲ್ಲಿ ನನ್ನ ಕುಟುಂಬದವರನ್ನು ನೆನಪು ಮಾಡಿಕೊಳ್ಳುತ್ತಾ ಇದ್ದೆ. ಅಂದ ಹಾಗೆ ನಿಮಗೆಲ್ಲರಿಗೂ ನನ್ನ ಕುಟುಂಬದ ಬಗ್ಗೆ ತಿಳಿಸುತ್ತೇನೆ ಕೇಳಿ. ನನ್ನ ಕುಟುಂಬದಲ್ಲಿ ನನ್ನ ತಂದೆ, ತಾಯಿ, ನನ್ನ ತಮ್ಮ ಮತ್ತು ನನ್ನ ಪ್ರೀತಿಯ ನಾಯಿ ಇದ್ದೇವೆ. ಇದೇನಪ್ಪ ನಾಯಿಯನ್ನು ಕೂಡ ನನ್ನ ಕುಟುಂಬದ ಸದಸ್ಯನೆಂದು ಕರೆಯುತ್ತಿದ್ದೇನೆ ಎಂದು ಆಶ್ಚರ್ಯ ಪಡುತ್ತಿದ್ದೀರಾ?

ಹೌದು ನಾನು ನನ್ನ ಮುದ್ದು ನಾಯಿಯನ್ನು ಅಷ್ಟೊಂದು ಪ್ರೀತಿಸುತ್ತಿದ್ದೇನೆ. ನಾನು 5 ವರ್ಷದವನಾಗಿದ್ದಾಗ ನನ್ನ ತಂದೆಯು ನನಗೆಂದು ಪುಟ್ಟ ನಾಯಿಯನ್ನು ತಂದಿದ್ದರು. ಆ ಪುಟ್ಟ ನಾಯಿಯು ನನ್ನನ್ನು ಹಾಗು ನಾನು ಆ ನಾಯಿಯನ್ನು ಒಂದು ಕ್ಷಣ ಕೂಡ ಬಿಟ್ಟು ಇರುತ್ತಿರಲಿಲ್ಲ. ಮಲಗುವಾಗಲು ಕೂಡ ಅದು ನನ್ನ ಪಕ್ಕದಲ್ಲೇ ಬಂದು ಮಲಗುತಿತ್ತು. ಶಾಲೆಗೆ ಹೋಗುವಾಗ ನನ್ನನ್ನೇ ಹಿಂಬಾಲಿಸುತ್ತಿತ್ತು. ನಾನು ಊಟ ಮಾಡುವ ತನಕ ಅದು ಕೂಡ ಮಾಡುತ್ತಿರಲಿಲ್ಲ.
ಅದೊಂದು ದಿನ ನಾನು ನನ್ನ ಸ್ನೇಹಿತನ ಜೊತೆ ಗಾಡಿಯಲ್ಲಿ ಹೋಗುತ್ತಿರುವಾಗ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದೆ, ನಾನು ಸಂಪೂರ್ಣ ಗುಣಮುಖನಾಗಿ ಮನೆಗೆ ಮರಳುವ ತನಕ ನನ್ನ ಮುದ್ದು ನಾಯಿಯು ಊಟವನ್ನು ಮಾಡಿರಲಿಲ್ಲ. ಆದರೆ ನಮ್ಮಿಬ್ಬರ ಈ ಜೊತೆಗಾರಿಕೆ ತುಂಬಾ ದಿನ ಉಳಿಯಲಿಲ್ಲ. ನನಗೆ ಸೇನೆಯಲ್ಲಿ ಕೆಲಸ ಸಿಕ್ಕಿತು. ದೇಶವನ್ನು ಕಾಯುವ ಹೆಮ್ಮೆಯ ಕೆಲಸವದು. ಮನೆ ಬಿಟ್ಟು ಹೋಗಲೇ ಬೇಕಾದಂತಹ ಪರಿಸ್ಥಿತಿ ಬಂತು. ನನ್ನ ಮುದ್ದು ನಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನ್ನ ತಮ್ಮನಿಗೆ ವಹಿಸಿ ಮನೆ ಬಿಟ್ಟು ಬಂದೆ. ಇಂದು ಮತ್ತೆ ಮನೆಗೆ ಮರಳುತ್ತಿದ್ದೇನೆ. ಸರಿಸುಮಾರು ಮೂರು ವರ್ಷಗಳ ನಂತರ ನನ್ನ ಕುಟುಂಬ ಮತ್ತು ನನ್ನ ಮುದ್ದು ನಾಯಿಯನ್ನು ನೋಡುತ್ತಿದ್ದೇನೆ.

ಇನ್ನೇನು ಕೆಲವು ಘಂಟೆಗಳು ಅಷ್ಟೇ ನಾನು ಮನೆ ತಲುಪುತ್ತೇನೆ ಎಂದುಕೊಳ್ಳುತ್ತಾ ಕಣ್ಣು ಮುಚ್ಚಿ ಮಲಗಿದೆ. ಕಣ್ಣು ತೆರೆಯುವಷ್ಟರಲ್ಲಿ ನನ್ನ ಊರು ಬಂದೇ ಬಿಟ್ಟಿತು. ನನ್ನನ್ನು ಬರಮಾಡಿಕೊಳ್ಳಲು ನನ್ನ ತಮ್ಮನು ಬಂದಿದ್ದನು. ನಗುತ್ತ ಅವನನ್ನು ತಬ್ಬಿಕೊಂಡು ಜೊತೆಯಲ್ಲಿ ಮನೆಯ ಕಡೆಗೆ ಹೊರಟೆವು. ಮನೆ ತಲುಪಿದ ನಂತರ ಬಾಗಿಲಿನ ಹತ್ತಿರ ಇದ್ದ ನನ್ನ ಮುದ್ದು ನಾಯಿಯು ನಾನು ಬಂದಿದ್ದನ್ನು ಕಂಡು ಓಡಿ ಬಂದು ನನ್ನ ಮೇಲೆ ಎಗರಿ ನನ್ನ ಮುಖವನ್ನು ನೆಕ್ಕಲು ಶುರು ಮಾಡಿತು. ಮೂರು ವರ್ಷಗಳ ಹಿಂದೆ ಹೇಗಿತ್ತೋ ಅದಕ್ಕಿಂತ ಸ್ವಲ್ಪ ದೊಡ್ದದ್ದಾಗಿತ್ತು ಆದರೆ ನನ್ನ ಮೇಲಿನ ಪ್ರೀತಿ ಮಾತ್ರ ಕಿಂಚಿತ್ತು ಕೂಡ ಕಡಿಮೆಯಾಗಿರಲಿಲ್ಲ. ನಂತರ ಮನೆಯ ಒಳಗಡೆ ಹೋಗಿ ತಂದೆ ತಾಯಿಯನ್ನು ಬೇಟಿಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ನನ್ನ ಹಾಸಿಗೆಯ ಮೇಲೆ ನನ್ನ ಮುದ್ದು ನಾಯಿಯು ಬಂದು ಮತ್ತೇ ನನ್ನ ಮುಖ ನೆಕ್ಕುತ್ತ ಬಾಲ ಅಲ್ಲಾಡಿಸತೊಡಗಿತು. ಮೂರು ವರ್ಷವಾದರೂ ಅದಕ್ಕೆ ನನ್ನ ಮೇಲೆ ಇರುವ ಪ್ರೀತಿಯು ಕಿಂಚಿತ್ತೂ ಕಡಿಮೆ ಆಗದಿರುವುದನ್ನು ಗಮನಿಸಿ ಈ ಮುದ್ದು ನಾಯಿಗೆ ಇರುವ ತರಹದ ಮನಸ್ಸು ಎಲ್ಲಾ ಮನುಷ್ಯರಿಗೆ ಇದ್ದಿದ್ದರೆ ಈ ಪ್ರಪಂಚದಲ್ಲಿ ಎಲ್ಲರೂ ಎಷ್ಟೊಂದು ಅನ್ಯೋನ್ಯವಾಗಿ ಪ್ರೀತಿಯಿಂದ ಬದುಕಬಹುದಿತ್ತು ಹಾಗೂ ನನ್ನ ಸ್ನೇಹಿತರನ್ನು ಕಳೆದುಕೊಂಡ ಆ ಯುದ್ದವೇ ಆಗುತ್ತಿರಲಿಲ್ಲ ಎಂದು ಯೋಚಿಸುತ್ತ ಕಣ್ಣೀರು ಹಾಕತೊಡಗಿದೆ.
For more Stories follow Karunadu Today
Click here to Join Our Whatsapp Group