
ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲ ದಿನಗಳಿಂದ ಎಲ್ಲಾ ಕೆಲಸಗಾರರು ಪ್ರತಿನಿತ್ಯ ಬೇರೆಯವರ ಬಗ್ಗೆ ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದರು. ಬೇರೆಯವರಿಂದ ತಮಗೆ ನಷ್ಟವಾಗುತ್ತಿದೆ ಎಂದೆಲ್ಲಾ ಮತ್ತೊಬ್ಬರನ್ನು ದೂಷಿಸುತ್ತಿದ್ದರು.
ಇದನ್ನು ಕೆಲ ದಿನಗಳಿಂದ ಗಮನಿಸಿದ ಕಂಪನಿಯ ಮ್ಯಾನೇಜರ್ ಎಲ್ಲರನ್ನು ಕರೆಸಿ ಏನು ತೊಂದರೆ ಆಗಿದೆ ಎಂದು ಕೇಳಿದ. ಆದರೆ ಯಾರೂ ಬಾಯಿಬಿಡಲಿಲ್ಲ, ಆದರೆ ಇವರ ಈ ನಡವಳಿಕೆಯಿಂದ ಆಫೀಸಿನಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗಿತ್ತು. ಇದರಿಂದ ಬಹಳ ನಿರಾಶೆಯಾದ ಮ್ಯಾನೇಜರ್ ಕೊನೆಗೆ ಒಂದು ದಿನ ಎಲ್ಲರಿಗು ಒಂದು ದೊಡ್ಡ ಊಟದ ಕೂಟವನ್ನು ಏರ್ಪಡಿಸಿದ, ಅದರಲ್ಲಿ ಎಲ್ಲಾ ರೀತಿಯ ತಿಂಡಿ-ತಿನಿಸುಗಳು ಮತ್ತು ಮನರಂಜನೆಗಾಗಿ ಒಳ್ಳೆಯ ಹಾಡುಗಾರರನ್ನು ಮತ್ತು ಇತರೆ ಎಲ್ಲಾ ರೀತಿಯ ಕಾರ್ಯಕ್ರಮವನ್ನು ಮಾಡಿದನು.

ಕೊನೆಗೆ ಪಾರ್ಟಿ ಮುಗಿದ ನಂತರ ಎಲ್ಲರಿಗೂ ಒಂದು ಗಿಫ್ಟ್ ನೀಡಿ ಎರಡು ದಿನಗಳ ರಜೆ ನೀಡಿದ. ಸಿಬ್ಬಂದಿ ಬಹುಶಃ ಒತ್ತಡದಲ್ಲಿರಬಹುದು, ಅವರಿಗೆ ಸ್ವಲ್ಪ ಸಮಯ ಬೇಕು ಎಂದು ಮ್ಯಾನೇಜರ್ ಅಂದುಕೊಂಡಿದ್ದನು, ಎರಡು ದಿನಗಳ ನಂತರ ಮತ್ತೆ ಆಫೀಸ್ ಶುರುವಾಯಿತು. ಅಂದಿನಿಂದ ಒಂದು ವಾರದವರೆಗೆ ಎಲ್ಲರೂ ಉಲ್ಲಾಸದಿಂದ ಕೆಲಸ ಮಾಡಿದರು, ಮ್ಯಾನೇಜರ್ ಇದನ್ನು ಕಂಡು ಖುಷಿಯಾದನು. ಆದರೆ, ಒಂದು ವಾರದ ನಂತರ ಮತ್ತದೇ ಹಳೆ ಕಥೆ ಶುರುವಾಯಿತು.
ಆಗ ಮ್ಯಾನೇಜರ್ ಎಲ್ಲಾ ಸಿಬ್ಬಂದಿಗಳಿಗೆ ಕಾಣುವ ಹಾಗೆ ಒಂದು ಪತ್ರ ಬರೆದು ನೋಟೀಸ್ ಬೋರ್ಡಿಗೆ ಹಾಕಿದನು. ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು, “ತಿಂಗಳುಗಳಿಂದ ನಿಮ್ಮ ಕೆಲಸದಲ್ಲಿ ವ್ಯತ್ಯಾಸವಾಗಿದೆ, ಯಾರೋ ನಿಮ್ಮನ್ನು ಪ್ರಗತಿಯತ್ತ ಸಾಗಲು ಬಿಡುತ್ತಿಲ್ಲ, ನಾನು ಅವನನ್ನು ಹಿಡಿದು ನನ್ನ ಕೋಣೆಯಲ್ಲಿ ಬಂದಿಸಿಟ್ಟಿರುವೆ. ಅವನನ್ನು ನೋಡುವ ಇಚ್ಛೆಯಿದ್ದರೆ ಎಲ್ಲರೂ ನನ್ನ ಕೋಣೆಗೆ ಬನ್ನಿ” ಎಂದು ಬರೆಯಲಾಗಿತ್ತು.
ಇದನ್ನು ಕಂಡ ಎಲ್ಲಾ ಸಿಬ್ಬಂದಿ ತಕ್ಷಣವೇ ತಿಳಿಸಿದ ಸ್ಥಳಕ್ಕೆ ಹೋದರು. ಅಲ್ಲಿ ಮ್ಯಾನೇಜರ್ ಒಬ್ಬರೇ ಇದ್ದರು, ಅವರು ಎಲ್ಲರನ್ನು ಕುರಿತು ಒಬ್ಬೊಬ್ಬರಾಗಿ ಬಂದು ನಿಮ್ಮ ಬೆಳವಣಿಗೆಗೆ ತಡೆಗೋಡೆಯಾಗಿರುವ ವ್ಯಕ್ತಿಯನ್ನು ನೋಡಿ ಎಂದನು. ಎಲ್ಲಾ ಸಿಬ್ಬಂದಿಗಳು ಯಾರವನು ಎಂದು ನೋಡಲು ಕಾತುರದಿಂದ ಮುಂದಾದರು. ಒಳಗೆ ಹೋಗಿ ಹೊರಗೆ ಬರುತ್ತಿದ್ದ ಎಲ್ಲಾ ಸಿಬ್ಬಂದಿಗಳ ಮುಖವು ಸಪ್ಪೆ ಆಗುತ್ತಿತ್ತು.

ಏಕೆಂದರೆ ಆ ಕೋಣೆಯಲ್ಲಿ ಮ್ಯಾನೇಜರ್ ಒಂದು ದೊಡ್ಡ ಕನ್ನಡಿಯನ್ನು ಇರಿಸಿದ್ದರು. ಅದರ ಕೆಳಗೆ, “ನಿಮ್ಮ ಬೆಳವಣಿಗೆಯನ್ನು, ಪ್ರಗತಿಯನ್ನು ತಡೆಯುತ್ತಿರುವ ವ್ಯಕ್ತಿ ಇವರೇ, ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುವುದು, ನೀವು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ” ಎಂದು ಬರೆಯಲಾಗಿತ್ತು ಆ ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಂಡು ಅದನ್ನು ಓದಿದ ನಂತರ ಎಲ್ಲರಿಗೂ ಅದು ನಿಜ ಅನ್ನಿಸಿತು. ಅಂದಿನಿಂದ ಎಲ್ಲರೂ ಮತ್ತೊಬ್ಬರನ್ನು ದೂಷಿಸದೆ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡತೊಡಗಿದರು.
For more Stories follow Karunadu Today
Click here to Join Our Whatsapp Group