ನೀವು ಸಾಮಾನ್ಯವಾಗಿ ಎಲ್ಲಾ ಕಥೆಗಳಲ್ಲಿ ನರಿ ತುಂಬಾ ಬುದ್ದಿವಂತ ಪ್ರಾಣಿ ಎಂದು ಕೇಳಿರುತ್ತೀರ, ಆದರೆ ಎಲ್ಲಾ ಪ್ರಾಣಿಗಳಿಗೂ ಭಯವಿರುತ್ತದೆ ಅದು ನರಿಗೂ ಅನ್ವಹಿಸುತ್ತದೆ. ಭಯದಿಂದ ಇರುವಾಗ ಎಲ್ಲರಿಗೂ ತಲೆ ಕೆಲಸ ಮಾಡುವುದಿಲ್ಲ. ಭಯದಿಂದ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ ಎನ್ನವುದಕ್ಕೆ ಈ ಕಥೆಯೇ ಸಾಕ್ಷಿ.

ಒಮ್ಮೆ ಬೇಸಿಗೆಯ ಸಮಯದಲ್ಲಿ ಕಾಡಿನಲ್ಲಿ ತುಂಬಾ ಬರದ ಸ್ಥಿತಿ ಎದುರಾಗಿತ್ತು, ಕಾಡಿನ ಪ್ರಾಣಿಗಳು ಊಟ-ನೀರಿಲ್ಲದೆ ಕಂಗಾಲಾಗಿದ್ದವು. ಅದರಲ್ಲಿ ನರಿಯೊಂದು ಊಟವಿಲ್ಲದೆ ಎರಡು ದಿನಗಳಿಂದ ಕಾಡೆಲ್ಲಾ ಅಲೆದಾಡುತ್ತಿತ್ತು, ಕೊನೆಗೆ ಅದಕ್ಕೆ ಒಂದು ಸ್ಥಳದಲ್ಲಿ ತಬಲದ ಶಬ್ದ ಕೇಳಿತು, ನರಿ ಯಾರೋ ಬೇಟೆಗಾರರು ಬಂದಿರಬೇಕೆಂದು ಹೆದರಿ ಮರದ ಹಿಂದೆ ಅಡಗಿ ಕುಳಿತಿತು.

ಆದರೆ ಆ ಶಬ್ದ ಎಷ್ಟು ಹೊತ್ತಾದರೂ ಕಡಿಮೆಯೇ ಆಗಲಿಲ್ಲ ನರಿಗೆ ಭಯವು ಇನ್ನೂ ಹೆಚ್ಚಾಯಿತು, ಅಲ್ಲಿಂದ ಓಡಿಹೋಗೋಣವೆಂದರೆ 2 ದಿನ ಊಟವಿಲ್ಲದಿರುವುದರಿಂದ ದೇಹದಲ್ಲಿ ಓಡಲು ಶಕ್ತಿ ಇರಲಿಲ್ಲ. ನರಿಯು ಸ್ವಲ್ಪ ಸಮಯ ಸುಮ್ಮನೆ ಅಲ್ಲಿಯೇ ಕುಳಿತು ಶಾಂತವಾಗಿ ಯೋಚಿಸಿತು, ಕೊನೆಗೆ ಆ ಶಬ್ದ ಏಕೆ ಬರುತ್ತಿದೆ ಎಂದು ತಿಳಿದುಕೊಳ್ಳುವ ಬದಲು ಸುಮ್ಮನೆ ಹೆದರುವುದು ಸರಿಯಲ್ಲವೆಂದು ನರಿಗೆ ಅನ್ನಿಸಿತು.

ಆಗ ಏನಾದರು ಆಗಲಿ ನೋಡಿಯೇ ಬಿಡೋಣ ಎಂದು ಧೈರ್ಯವಾಗಿ ಮುಂದೆ ಸಾಗಿತು. ಆಗ ಯಾರೋ ಕಾಡಿನಲ್ಲಿ ಕ್ಯಾಂಪ್ ಮಾಡಿ ಬಿಟ್ಟು ಹೋದ ತಬಲಕ್ಕೆ ಮರದ ಟೊಂಗೆಗಳು ಬಡಿಯುತ್ತಿದ್ದವು ಅದರಿಂದ ಆ ಶಬ್ದ ಬರುತ್ತಿತ್ತು, ಇದಲ್ಲದೆ ನರಿಗೆ ಇನ್ನೊಂದು ಅಚ್ಚರಿ ಕಾದಿತ್ತು, ಅದೇನೆಂದರೆ ಸರಿಯಾಗಿ ಆ ತಬಲದ ಮುಂದೆಯೇ ಒಂದು ಸತ್ತ ಪ್ರಾಣಿ ಬಿದ್ದಿತ್ತು. ನರಿ ಅದನ್ನು ನೋಡಿ ಕುಣಿದು-ಕುಪ್ಪಳಿಸಿತು, ತಾನು ಧೈರ್ಯ ಮಾಡಿ ಮುಂದೆ ಬಂದಿದ್ದಕ್ಕೆ ಒಳ್ಳೆಯ ಫಲ ಸಿಕ್ಕಿದೆ ಎಂದು ಹರುಷದಿಂದ ಸಿಕ್ಕ ಆಹಾರವನ್ನು ಸೇವಿಸಿತು.

ಇದರಿಂದ ನಮಗೆ ತಿಳಿಯುವ ವಿಷಯವೇನೆಂದರೆ ಜೀವನದಲ್ಲಿ ನಾವು ಯಾವುದೇ ವಿಷಯದಲ್ಲಾಗಲಿ, ಯಾವುದೇ ಸಂದರ್ಭದಲ್ಲಾಗಲಿ ಧೈರ್ಯದಿಂದ ಮುಂದೆ ಸಾಗಿದರೆ ಮಾತ್ರ ಜಯ ಸಿಗುತ್ತದೆ.

For more Stories follow Karunadu Today

Click here to Join Our Whatsapp Group