ಈ ಜಗತ್ತಿನಲ್ಲಿ ಅದೆಂತಹ ಜನರು ಇರುತ್ತಾರೆಂದರೆ, ತಾವು ತಪ್ಪು ಮಾಡಿದರೂ ಅಥವ ತಮ್ಮಲ್ಲೇ ತಪ್ಪು ಇದ್ದರೂ ಕೂಡ ಅದನ್ನು ಒಪ್ಪಿಕೊಳ್ಳದೆ ಬೇರೆಯವರನ್ನು ದೂಷಿಸುತ್ತಿರುತ್ತಾರೆ. ಆದರೆ ಅಹಂಕಾರದ ಕಣ್ಣು ಮುಚ್ಚಿ ಜ್ಞಾನದ ಕಣ್ಣು ತೆರೆದಾಗಲೇ ಒಂದು ಸುಂದರ ಜಗತ್ತನ್ನು ಕಾಣಲು ಸಾಧ್ಯ ಎಂಬುದಕ್ಕೆ ಈ 60 ವರ್ಷದ ಅಜ್ಜನ ಕಥೆಯೇ ಸಾಕ್ಷಿ ನೋಡಿ.

ಒಂದೊಮ್ಮೆ ಅಜ್ಜನೊಬ್ಬ ತಮ್ಮ ಮನೆಯಲ್ಲಿ ಮದ್ಯಾಹ್ನ ಮಲಗಿದ್ದನು. ಬೇಸಿಗೆ ಕಾಲ ಬೇರೆ, ಬಿಸಿಲಿನ ತಾಪಕ್ಕೆ ಹೊರಗಡೆ ತಿರುಗಾಡಲು ಆಗದೇ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಬೇಸಿಗೆ ರಜೆಗೆ ಮನೆಗೆ ಬಂದಿದ್ದ ಮೊಮ್ಮಕ್ಕಳು ಮಲಗಿದ್ದಂತಹ ಅಜ್ಜನನ್ನು ಸತಾಯಿಸಲು ಯೋಜನೆ ರೂಪಿಸಿದರು.

ಇಬ್ಬರು ಮೊಮ್ಮಕಳು ಸೇರಿ ಅಜ್ಜನ ಮೂಗಿನ ಹತ್ತಿರ ಒಂದು ಕೊಳೆತ ಹಣ್ಣಿನ ಸಿಪ್ಪೆಯನ್ನು ತಿಕ್ಕಿದರು. ಆದರೂ ಅಜ್ಜ ಏಳಲಿಲ್ಲ, ಕೆಲ ನಿಮಿಷದ ನಂತರ ಎಚ್ಚರಗೊಂಡ ಅಜ್ಜನಿಗೆ ಅಚ್ಚರಿ ಕಾದಿತ್ತು. ರೂಮಿನಲ್ಲಿ ಏನೋ ಕೆಟ್ಟ ವಾಸನೆ ಬಂದಂತಾಯಿತು. ಈ ಕೋಣೆ ತುಂಬಾ ಕೊಳಕಾಗಿದೆ ಎಂದು ಹೊರಗೆ ಹೋದ.

ಹೊರಗೆ ಹಾಲ್-ನಲ್ಲಿ ಟಿವಿ ನೋಡಲು ಕುಳಿತ ಆದರೆ ಆ ಕೆಟ್ಟ ವಾಸನೆ ಅಲ್ಲಿಯೂ ಬಿಡಲಿಲ್ಲ.ಅಯ್ಯೋ ಈ ಕೋಣೆಯು ಕೂಡ ಕೊಳಕು, ಸರಿಯಾಗಿ ಸ್ವಚ್ಛ ಮಾಡಿಲ್ಲ ಇಲ್ಲಿಯೂ ಸಹ ಕೊಳೆತ ವಾಸನೆ ಬರುತ್ತಿದೆ, ಎಂದು ಹೊರಗಡೆ ಹೋದ.ಹೊರಗೆ ಅಂಗಳದಲ್ಲೂ ಕೂಡ ಮತ್ತದೇ ವಾಸನೆ ಹಿಂಬಾಲಿಸಿತು, ಮನೆಯವರಿಗೆ ಹಿಡಿ ಶಾಪ ಹಾಕಿದ ಅಜ್ಜ ಈಗಿನ ಕಾಲದವರಿಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಬರುವುದಿಲ್ಲ ಎಂದು ವಾಕ್ ಮಾಡಲೆಂದು ಉದ್ಯಾನವನದೆಡೆಗೆ ಹೊರಟ. ಎಲ್ಲಿ ಹೋದರು ಆ ವಾಸನೆ ಅವರನ್ನು ಹಿಂಬಾಲಿಸುತ್ತಿತ್ತು, ಈ ನಗರ ಸಭೆಯವರಿಗೆ ರಸ್ತೆಯನ್ನು ಸ್ವಚ್ಛವಾಗಿಡಲು ಬರುವುದಿಲ್ಲ ಎಂದು ಬೈದುಕೊಂಡ.

ಹೀಗೆ ಮುಂದೆ ಸಾಗುತ್ತ ಉದ್ಯಾನವನ ಸೇರಿದ ಅಲ್ಲಿ ಕೆಲ ಕ್ಷಣ ವಾಕ್ ಮಾಡಿದ ಅಲ್ಲಿಯೂ ಸಹ ವಾಸನೆ ಬಿಡಲಿಲ್ಲ ಈ ಸರ್ಕಾರಕ್ಕೆ ಉದ್ಯಾನವನ ನಿರ್ವಹಿಸಲು ಬರುವುದಿಲ್ಲ ಎಂದು ಬೈಯುತ್ತಾ ಮನೆಯ ಕಡೆಗೆ ನಡೆದ. ಮನೆಯಲ್ಲಿ ಮುಖ ತೊಳೆಯಲೆಂದು ಹೋದಾಗ ಕನ್ನಡಿಯಲ್ಲಿ ಮೂಗಿನ ಕೆಳಗೆ ಆಂಟಿಕೊಂಡಿದ್ದ ಆ ಕೊಳೆತ ಹಣ್ಣಿನ ಸಿಪ್ಪೆಯನ್ನು ನೋಡಿದ.

ಅಜ್ಜನಿಗೆ ಅದು ಎಲ್ಲಿಂದ ಬಂದಿತ್ತು ಎಂದು ಗೊತ್ತಾಗಲಿಲ್ಲ, ಮುಖ ತೊಳೆದ ನಂತರ ಆ ಕೊಳೆತ ವಾಸನೆ ಹೋಯಿತು. ಆಗಲೇ ಅವರಿಗೆ ಗೊತ್ತಾಗಿದ್ದು ದೋಷವಿರುವುದು ಹೊರಗಡೆ ಅಲ್ಲ ತನ್ನಲ್ಲೇ ಅಂತ. ಅದಕ್ಕೆ ಹೇಳುವುದು ಬೇರೆಯವರನ್ನು ದೋಷಿಸುವುದಕ್ಕು ಮುಂಚೆ ನಮ್ಮಲಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು.

For more Stories follow Karunadu Today

Click here to Join Our Whatsapp Group