
ಪ್ರತಿದಿನದಂತೆ ಅಂದೂ ಕೂಡ ನನ್ನ ನಾಯಿಯ ಜೊತೆಗೆ ಬೆಳಗ್ಗೆ ಎದ್ದು ಮನೆಯ ಹತ್ತಿರವಿರುವ ಪಾರ್ಕಿಗೆ ವಾಯು ಸೇವನೆಗೆಂದು ತೆರಳಿದ್ದೆ. ಅದೇನೋ ಗೊತ್ತಿಲ್ಲ ಅಂದಿನ ದಿನವು ತುಂಬಾ ಸುಂದರವಾಗಿತ್ತು. ನನ್ನ ಹಾಗೆಯೇ ತುಂಬಾ ಜನರು ಬಂದಿದ್ದರು. ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೇಳಿಕೊಳ್ಳುವಷ್ಟು ಸಂಬಳವಿಲ್ಲದಿದ್ದರೂ ಸಹ ಜೀವನ ಚೆನ್ನಾಗಿಯೇ ನಡೆಯುತ್ತಿದೆ. ಮನೆಯಲ್ಲಿ ಅಮ್ಮ ಕೂಡ ವಯಸ್ಸು ಮೀರುತ್ತಿದೆ ಬೇಗ ಮದುವೆ ಮಾಡಿಕೋ ಎಂದು ಪ್ರತಿ ದಿನ ಪೀಡಿಸುತ್ತಿದ್ದಾಳೆ. ಏನು ಮಾಡಲಿ ನನಗೆ ಇಷ್ಟವಾಗುವಂಥ ಹುಡುಗಿ ಸಿಗಬೇಕು ಅಲ್ಲವೆ. ಅದಕ್ಕಾಗಿ ಕಾಯುತ್ತಾ ಇದ್ದೆ. ಪ್ರತಿ ದಿನದಂತೆ ಅಂದು ಕೂಡ ಪಾರ್ಕಿನಲ್ಲಿ ವಾಯು ಸೇವನೆ ಮಾಡುತ್ತಾ ಕುಳಿತಿದ್ದಾಗ ನನ್ನ ಮುದ್ದು ಸಾಕು ನಾಯಿಯು ನನ್ನ ಕೈ ತಪ್ಪಿಸಿಕೊಂಡು ಓಡಲು ಶುರು ಮಾಡಿತು. ಅದನ್ನು ಹಿಡಿಯಲು ಎದ್ದು ಬಿದ್ದು ಓಡತೊಡಗಿದೆ. ಎಷ್ಟು ಕೂಗಿದರೂ ನಿಲ್ಲದೆ ಜೋರಾಗಿ ಓಡುತ್ತಲೇ ಇತ್ತು. ನೋಡ ನೋಡುತ್ತಲೇ ಇಬ್ಬರ ಮೇಲೆ ಹಾರಿ ಕಚ್ಚತೊಡಗಿತು. ಅದನ್ನು ಕಂಡು ನನಗೆ ಗಾಬರಿಯಾಯಿತು. ಪಾರ್ಕಿನಲ್ಲಿ ಇದ್ದ ಜನರು ಓಡಿ ಬಂದರು. ನಾನು ಅದನ್ನು ಗಾಬರಿಯಿಂದ ನೋಡುತ್ತ ಸ್ವಲ್ಪ ಎಡಗಡೆಗೆ ನೋಡಿದರೆ ಒಂದು ಸುಂದರವಾದ ಹುಡುಗಿ ಅಳುತ್ತಾ ನಿಂತಿದ್ದಳು. ಅದನ್ನು ನೋಡಿದ ಮೇಲೆ ತಿಳಿಯಿತು ಇಲ್ಲಿ ಏನೋ ಆಗಿದೆ ಅದಕ್ಕೆ ನನ್ನ ಮುದ್ದು ನಾಯಿಯು ಈ ತರ ಓಡಿ ಬಂದಿದೆ ಎಂದು. ಹೇಗೋ ಮಾಡಿ ನನ್ನ ನಾಯಿಯನ್ನು ಸಮಾಧಾನ ಪಡಿಸಿ ದೂರ ಎಳೆದುಕೊಂಡೆ. ಆವಾಗಲೇ ನನಗೆ ಗೊತ್ತಾಗಿದ್ದು ಅವರಿಬ್ಬರು ಕಳ್ಳರು , ಆ ಹುಡುಗಿಯ ಕತ್ತಿನಲ್ಲಿ ಇದ್ದ ಬಂಗಾರದ ಸರವನ್ನು ಕದಿಯಲು ಪ್ರಯತ್ನಿಸಿದ್ದರು ಎಂದು.

ಅದನ್ನು ಕಂಡ ನನ್ನ ನಾಯಿಯು ಆ ಹುಡುಗಿಯನ್ನು ರಕ್ಷಿಸಲು ಓಡಿ ಬಂದು ಕಳ್ಳರ ಮೇಲೆ ಎಗರಿದೆ ಎಂದು. ಕೊನೆಗೆ ನೆರೆದಿದ್ದ ಜನರ ಸಹಾಯದಿಂದ ಆ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದೆವು. ನಂತರ ಆ ಮುದ್ದು ಮುಖದ ಹುಡುಗಿಯು ನನ್ನ ಬಳಿ ಬಂದು ತುಂಬಾ ಧನ್ಯವಾದಗಳು ಎಂದು ಹೇಳಿ ನಕ್ಕಳು. ಅವಳ ಆ ಮುದ್ದು ನಗುವನ್ನು ಕಂಡು ನನ್ನ ಎದೆಯಲ್ಲಿ ಅವಳ ಮೇಲೆ ಪ್ರೀತಿ ಹುಟ್ಟುವ ಎಲ್ಲಾ ಲಕ್ಷಣಗಳು ಕಂಡವು. ಹಾಗೆಯೇ ಮಾತನಾಡುತ್ತ ಒಬ್ಬರಿಗೊಬ್ಬರನ್ನು ಪರಿಚಯ ಮಾಡಿಕೊಂಡೆವು. ಅಕಸ್ಮಾತ್ ಆಗಿ ನನ್ನ ಜೀವನದಲ್ಲಿ ಪ್ರವೇಶಿಸಿದ ಅವಳು ನನ್ನ ಮನಸ್ಸಿನಲ್ಲೂ ಪ್ರವೇಶಿಸುವ ಲಕ್ಷಣಗಳು ಕಂಡವು. ಹೀಗೆ ನನ್ನ ಮತ್ತು ಅವಳ ಪರಿಚಯವಾಯಿತು. ಇಂದಿಗೆ ಒಂದು ವರ್ಷವಾಯ್ತು, ಅವಳ ಮೇಲೆ ನನಗಿರುವ ಪ್ರೀತಿಯನ್ನು ಹೇಳಬೇಕು ಎಂದು ತೀರ್ಮಾನಿಸಿದ್ದೇನೆ. ಅವಳು ಒಪ್ಪೇ ಒಪ್ಪುತ್ತಾಳೆ ಎನ್ನುವ ನಂಬಿಕೆ ಇದೆ. ನೋಡೋಣ ಏನಾಗುತ್ತದೆ ಎಂದು.