"ಸ್ಪೂರ್ತಿ ಕಥೆಗಳು"

ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇದ್ದರು. ಅವರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮನಿಗೆ ಮಕ್ಕಳು ಹೆಚ್ಚು. ಅಣ್ಣನಿಗೆ ಮಕ್ಕಳು ಇರಲಿಲ್ಲ. ಆ ಅಣ್ಣ ತಮ್ಮಂದಿರು ಎಂದೂ ಜಗಳ ವಾಡುತ್ತಿರಲಿಲ್ಲ. ಆದರೆ ಮನೆಯಲ್ಲಿ ಮಡದಿಯರ ಕಾಟ, ಜಗಳ ಪ್ರಾರಂಭವಾಗಿ ಬರಬರುತ್ತಾ ಹೆಚ್ಚಾಯಿತು. ಇದರಿಂದ ಮನೆ ಬೇರೆ ಬೇರೆ ಮಾಡಬೇಕಾಯಿತು. ಆಸ್ತಿ ಬೇರೆ ಬೇರೆ ಆಯಿತು. ಹೊಲ ಭಾಗವಾಯಿತು. ಅವು ಅಕ್ಕಪಕ್ಕದಲ್ಲಿ ಹೊಂದಿಕೊಂಡೇ ಇದ್ದವು. ಅಣ್ಣ ತಮ್ಮಂದಿರು ಅವರವರ ಹೊಲದಲ್ಲಿ ಬೆಳೆ ಬೇರೆಯಾಗಿಯೇ ಬೆಳೆದರು. ಇಬ್ಬರ ಹೊಲದಲ್ಲಿ ಬೆಳೆ ಚೆನ್ನಾಗಿಯೇ ಬೆಳೆಯಿತು. ಬೆಳೆ ರಾಶಿಯಾಯಿತು. ರಾಶಿಯನ್ನು ಹಾಕಿ ಇಬ್ಬರೂ ರಾತ್ರಿ ಕಾವಲು ಕಾಯಲು ಕುಳಿತರು. ಇಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಆದರೆ ಅವರು ಪರಸ್ಪರ ಮಾತನಾಡುತ್ತಿರಲಿಲ್ಲ. ಅದಕ್ಕೆ ಕಾರಣ ಆ ಮಡದಿಯರ ಕಾಟ. ಅಂದು ರಾತ್ರಿ ಅಣ್ಣ, ತಮ್ಮನ ಬಗ್ಗೆ ಚಿಂತೆ ಮಾಡುತ್ತಾ “ತಮ್ಮ ಒಬ್ಬನೇ ಇದ್ದಾನೆ, ಅವನಿಗೆ ಮಕ್ಕಳು ಹೆಚ್ಚು, ಸಂಸಾರ ದೊಡ್ಡದು. ಎಷ್ಟು ಕಷ್ಟಪಡು ತಾನೊ ಏನೋ, ಅವನು ಯಾರಲ್ಲಿಯೂ ತನ್ನ ಕಷ್ಟವನ್ನು ಹೇಳಿಕೊಳ್ಳು ವುದಿಲ್ಲ.” ಎಂದು ಚಿಂತಿಸಿ ಆತನಿಗೆ ಹೇಗೆ ಸಹಾಯ ಮಾಡಲಿ ಎಂದು ಯೋಚಿಸಿ, ರಾತ್ರಿ ತಮ್ಮ ಮಲಗಿದ್ದನ್ನು ನೋಡಿ ತನ್ನ ರಾಶಿಯಿಂದ ಧಾನ್ಯವನ್ನು ಚೀಲದಲ್ಲಿ ತುಂಬಿಕೊಂಡು ತಮ್ಮನ ರಾಶಿಯಲ್ಲಿ ಹಾಕಿ ಬಂದು ಮಲಗಿದನು. ಅದೇ ರೀತಿ ತಮ್ಮ ಕೂಡಾ ಅಣ್ಣನಂತೆಯೇ ಚಿಂತಿಸಿ ಅಣ್ಣನು ಒಬ್ಬನೇ ಇದ್ದಾನೆ, ಆತನಿಗೆ  ಮಕ್ಕಳು ಇಲ್ಲ. ಅಣ್ಣ ಅತ್ತಿಗೆ ಇಬ್ಬರೆ. ನನಗಂತೂ ಮಕ್ಕಳು ಇದ್ದಾರೆ ಸಹಾಯಕ್ಕೆ. ಅಣ್ಣನ ಸಹಾಯಕ್ಕೆ ಯಾರಿದ್ದಾರೆ? ಅವನು ತನ್ನ ಕಷ್ಟವನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ತಾನು ಯಾವ ರೀತಿಯಿಂದಲಾದರೂ ಸಹಾಯ ಮಾಡಬೇಕೆಂದುಕೊಂಡನು. ಕಾರಣ ರಾತ್ರಿ ಎದ್ದು ಅಣ್ಣ ಮಲಗಿದ್ದನ್ನು ನೋಡಿ ತಾನು ತನ್ನ ಧಾನ್ಯದ ರಾಶಿಯಿಂದ ಧಾನ್ಯವನ್ನು ಚೀಲದಲ್ಲಿ ತುಂಬಿಕೊಂಡು ತನ್ನ ಅಣ್ಣನ ರಾಶಿಯಲ್ಲಿ ಹಾಕಿ ಬಂದು ಮಲಗಿಕೊಂಡನು.

ಮುಂಜಾನೆ ಎದ್ದು ನೋಡಿದಾಗ ಇಬ್ಬರ ರಾಶಿಗಳೂ ಸಮವಾಗಿದ್ದವು. ಅವರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಅಣ್ಣನು ಮಾಡಿದ್ದು ತಮ್ಮನು ಮಾಡಿದ್ದಾನೆ. ತಮ್ಮನು ಮಾಡಿದ್ದು ಅಣ್ಣನು ಮಾಡಿದ್ದಾನೆ. ಇಬ್ಬರ ಕಣ್ಣಲ್ಲಿಯೂ ನೀರು ತುಂಬಿಕೊಂಡು ಒಬ್ಬರನ್ನು ಒಬ್ಬರು ಅಪ್ಪಿಕೊಂಡು  ಅಳಹತ್ತಿದರು. ಅಲ್ಲಿಯ ಜನರು ಇದನ್ನು ನೋಡಿ ಅಣ್ಣ ತಮ್ಮಂದಿರೆಂದರೆ ಹೀಗಿರಬೇಕು ಎಂದು ಕೊಂಡಾಡಹತ್ತಿದರು.

ಸ್ಕೂಲದಲ್ಲಿಯೇ ಒಬ್ಬರ ಹಿತವನ್ನು ಇನ್ನೊಬ್ಬರು ಪರಸ್ಪರ ಬಯಸಿದಾಗ ಯಾರೂ ಕಷ್ಟದಿಂದ ಇರುವುದಿಲ್ಲ. ಅಂದಮೇಲೆ ಆಧ್ಯಾತ್ಮ ಜೀವನದಲ್ಲಿ ಪರಸ್ಪರ ಸಹಕಾರ ಮನೋಭಾವನೆ ಇದ್ದರೆ ಸಾಧನೆ ಸುರಳಿತವಾಗುವುದು. ನಾವು ಈ ಜಗತ್ತಿನಿಂದ ಆ ಜಗತ್ತಿಗೆ (ಸೂಕ್ಷ್ಮ ಜಗತ್ತಿಗೆ) ಹೋಗಬೇಕಿದೆ. ಪ್ರೀತಿ, ಪ್ರೇಮ, ಶಾಂತಿ ಹಾಗೂ ಆನಂದವನ್ನು ತೆಗೆದುಕೊಂಡು ಹೋಗಲಿಕ್ಕೆ ಬಂದಿದ್ದೇವೆ. ನಾವು ಇಲ್ಲಿ ಪ್ರೀತಿ, ಪ್ರೇಮ, ವಿಶ್ವಾಸದಿಂದ ಇರಲು ಕಲಿಯಬೇಕು. ಮನುಷ್ಯನಿಗೆ ಇನ್ನೊಂದು ಜಗತ್ತು ಇದೆ ಎಂದು ತಿಳಿದಿಲ್ಲ. ದೇವರಲ್ಲಿ ಶಾಂತಿ, ಪ್ರೇಮ, ಭಕ್ತಿ, ಆನಂದ ಇದೆ. ಅದೇ ದೇವರು. ಅಂತಹ ಗುಣಗಳನ್ನು ನಮ್ಮಲ್ಲಿ ಇಟ್ಟುಕೊಳ್ಳುವುದನ್ನು ಬಿಟ್ಟು ಸಿಟ್ಟು, ಸಿಡುಕು, ದ್ವೇಷ, ಅಸೂಯೆ ಮೋಸ ಇವನ್ನು ಇಟ್ಟುಕೊಂಡರೆ ದೇವರ ಪ್ರೀತಿಗೆ ಹೇಗೆ ಪಾತ್ರರಾಗುತ್ತೇವೆ? ಒಳ್ಳೆಯ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡರೆ ದೇವರು ನಮ್ಮಲ್ಲಿ ವಾಸ ಮಾಡುತ್ತಾನೆ. ಒಟ್ಟಿನಲ್ಲಿ ದೇವರ ಗುಣಗಳನ್ನು ಬೆಳೆಸಿಕೊಂಡರೆ ನಾವು ದೇವರ ಸಾಮ್ರಾಜ್ಯವನ್ನು ಹೊಂದಲು ಅರ್ಹರಾಗುತ್ತೇವೆ.

For more Stories follow Karunadu Today

Click here to Join Our Whatsapp Group